ಲಖನೌ(ಉತ್ತರ ಪ್ರದೇಶ): ಖಲಿಸ್ತಾನಿ ಉಗ್ರ, ನಿಷೇಧಿತ ಸಿಕ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಮತ್ತೊಮ್ಮೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಹೇಳಿದ್ದಾನೆ. ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಾಗಿಯೂ ಆಡಿಯೋ ಮೂಲಕ ಬೆದರಿಕೆಯೊಡ್ಡಿದ್ದಾನೆ.
ಅಯೋಧ್ಯೆಯಲ್ಲಿ ಮೂವರು ಶಂಕಿತ ಖಲಿಸ್ತಾನಿಗಳನ್ನು ಯುಪಿ ಎಟಿಎಸ್ ಈಗಾಗಲೇ ಬಂಧಿಸಿದೆ. ಇದರಿಂದ ಕುಪಿತಗೊಂಡ ಪನ್ನು, ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇದಲ್ಲದೇ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ನಾಶ ಮಾಡುವುದಾಗಿಯೂ ತಿಳಿಸಿದ್ದಾನೆ. ಭದ್ರತಾ ಸಂಸ್ಥೆ ತನ್ನ ಮೂವರು ಸಹೋದ್ಯೋಗಿಗಳಿಗೆ ಅನಗತ್ಯ ಕಿರುಕುಳ ನೀಡಬಾರದು ಎಂದಿದ್ದಾನೆ. ಯುಕೆಗೆ ಸೇರಿದ ಫೋನ್ ನಂಬರ್‌ವೊಂದರಿಂದ ರೆಕಾರ್ಡಿಂಗ್ ಸಂದೇಶ ಬಂದಿರುವುದಾಗಿ ತಿಳಿದುಬಂದಿದೆ.
"ಯುಪಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ಹಾಕುತ್ತಿದ್ದಾರೆ. ಅವರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಯಾರೂ ಉಳಿಸಲು ಸಾಧ್ಯವಿಲ್ಲ. ಜನವರಿ 22ರಂದು ಎಸ್‌ಎಫ್‌ಜೆ ಇದಕ್ಕೆ ಉತ್ತರಿಸುತ್ತದೆ. ಅಂದು ನಾವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ರಾಜಕೀಯವಾಗಿ ಹತ್ಯೆ ಮಾಡುತ್ತೇವೆ" ಎಂದು ಆಡಿಯೋ ಸಂದೇಶದಲ್ಲಿ ಹೇಳಿದ್ದಾನೆ.
ಮೂವರ ಬಂಧನ: ಗುರುವಾರ ಸಂಜೆ ಯುಪಿ ಎಟಿಎಸ್ ಗೌಪ್ಯ ಮಾಹಿತಿಯ ಆಧಾರದ ಮೇಲೆ ಅಯೋಧ್ಯೆಯಿಂದ ಮೂವರು ಅನುಮಾನಾಸ್ಪದ ಯುವಕರನ್ನು ಬಂಧಿಸಿತ್ತು. ಇದರಲ್ಲೊಬ್ಬ ರಾಜಸ್ಥಾನದ ಸಿಕಾರ್ ನಿವಾಸಿಯಾಗಿರುವ ಯುವಕ ಧರಂವೀರ್ ಎಂದು ತಿಳಿದುಬಂದಿದೆ. ಯುಪಿ ಎಟಿಎಸ್ ಎಲ್ಲಾ ಮೂವರು ಶಂಕಿತರನ್ನು ವಿಚಾರಣೆ ನಡೆಸುತ್ತಿದೆ. ಈ ಮೂವರು ಅರ್ಶ್ ದಲಾ ಗ್ಯಾಂಗ್‌ನ ಸದಸ್ಯರೆಂದು ಹೇಳಲಾಗಿದೆ. ಇದನ್ನು ಭಾರತ ಸರ್ಕಾರವು ಭಯೋತ್ಪಾದಕರ ಗುಂಪು ಎಂದು ಘೋಷಿಸಿದೆ.
ಸಿಎಂಗೆ ಎಚ್ಚರಿಕೆ ನೀಡಿದ್ದ ಪನ್ನು: ಇತ್ತೀಚೆಗಷ್ಟೇ ಪಂಜಾಬ್ ಸಿಎಂ ಭಗವಂತ್ ಮಾನ್ ಅವರಿಗೆ ಗುರುಪತ್ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿರುವ ವಿಡಿಯೋ ಹರಿದಾಡಿತ್ತು. ಗಣರಾಜ್ಯೋತ್ಸವದಂದು ಮಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು.
ಇದನ್ನೂ ಓದಿ: ಹೌತಿ ಬಂಡುಕೋರರ ವಿರುದ್ಧ ದಾಳಿ ಮುಂದುವರಿಸಿದ ಅಮೆರಿಕ