ಎರ್ನಾಕುಲಂ(ಕೇರಳ): ವಿವಾಹವಾಗುವ ನೈಜ ಉದ್ದೇಶದೊಂದಿಗೆ ಸಹಮತದೊಂದಿಗೆ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದುವುದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂದು ವೇಳೆ ವ್ಯಕ್ತಿ ಮದುವೆಯಾಗುವ ಉದ್ದೇಶವಿಲ್ಲದೇ, ಸುಳ್ಳು ಭರವಸೆ ಮೂಲಕ ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಬಂಧ ಬೆಳೆಸಿದರೆ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಬಹುದು ಎಂದು ಹೈಕೋರ್ಟ್ ಉಲ್ಲೇಖಿಸಿದ್ದು, ವ್ಯಕ್ತಿಯೋರ್ವನ ವಿರುದ್ಧ ಇದ್ದ ಪ್ರಕರಣಗಳನ್ನು ವಜಾಗೊಳಿಸಿದೆ.
ಇಡುಕ್ಕಿ ಮೂಲದ ಆರೋಪಿಯೊಬ್ಬ ತನ್ನ ಸಂಬಂಧಿಯಾಗಿದ್ದ ಮಹಿಳೆಗೆ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ದಾಖಲಾಗಿತ್ತು. ಆರೋಪಿಯು ಮೂರು ದಿನಗಳ ಕಾಲ ಸಂಬಂಧ ಹೊಂದಿದ ಬಳಿಕ ಮಹಿಳೆಯನ್ನು ಕಳುಹಿಸಿ, ಬೇರೊಂದು ಮಹಿಳೆಯ ಜೊತೆ ವಿವಾಹವಾಗಿದ್ದಾನೆ ಎಂದು ಮಹಿಳೆಯ ಪರ ಪ್ರಾಸಿಕ್ಯೂಷನ್ ವಾದ ಮಾಡಿತ್ತು. ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾಧೀನ ನ್ಯಾಯಾಲಯ ಆರೋಪಿಗೆ ಶಿಕ್ಷೆ ಘೋಷಿಸಿ, ದಂಡವನ್ನೂ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದನು.
ಈ ಹಿನ್ನೆಲೆಯಲ್ಲಿ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯು ಉದ್ದೇಶಪೂರ್ವಕವಾಗಿ ಮಹಿಳೆಯನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ್ದಾನೆ ಎಂಬುದಕ್ಕೆ ಯಾವುದೇ ಸೂಕ್ತ ಸಾಕ್ಷಿ ಇಲ್ಲ. ಹೀಗಾಗಿ ಪ್ರಾಸಿಕ್ಯೂಷನ್ ವಾದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಆರೋಪಿಗೆ ವಿಧಿಸಲಾಗಿದ್ದ ಶಿಕ್ಷೆ ಮತ್ತು ದಂಡವನ್ನು ಹೈಕೋರ್ಟ್ ವಜಾಗೊಳಿಸಿದೆ.
ಇದನ್ನೂ ಓದಿ: ನಿವೃತ್ತ ನ್ಯಾಯಮೂರ್ತಿ ಮನೆಯಲ್ಲಿ ಕಳ್ಳತನ.. ಅಲ್ಲೇ ಪಾರ್ಟಿ ಮಾಡಿದ ಖದೀಮರು!