ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಏಳು ಮಹಿಳಾ ಕುಸ್ತಿಪಟುಗಳು ನೀಡಿರುವ ಲೈಂಗಿಕ ಕಿರುಕುಳ ಆರೋಪದ ದೂರಿನ ಬಗ್ಗೆ ಇಂದೇ (ಶುಕ್ರವಾರ) ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಅನೇಕ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಅಲ್ಲದೇ, ಈ ಕುರಿತ ತುರ್ತು ವಿಚಾರಣೆಗಾಗಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿಎಸ್ ನರಸಿಂಹ ನೇತೃತ್ವದ ಪೀಠವು ಕುಸ್ತಿಪಟುಗಳ ಅರ್ಜಿ ವಿಚಾರಣೆ ನಡೆಸಿತು.
ಈ ವೇಳೆ ದೆಹಲಿ ಪೊಲೀಸರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಾವು ಎಫ್‌ಐಆರ್ ದಾಖಲಿಸಲು ನಿರ್ಧರಿಸಿದ್ದೇವೆ. ಅದನ್ನು ಇಂದೇ ದಾಖಲಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಕುಸ್ತಿಪಟುಗಳಿಗೆ ಬೆದರಿಕೆ ಬಗ್ಗೆ ಪರಿಶೀಲನೆ ಮಾಡಬೇಕು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯರಲ್ಲಿ ಒಬ್ಬರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ನ್ಯಾಯ ಪೀಠವು ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತು. ಈ ಹಿಂದಿನ ವಿಚಾರಣೆಯಲ್ಲಿ ಕುಸ್ತಿಪಟುಗಳು ಮಾಡಿರುವ ಆರೋಪಗಳು 'ಗಂಭೀರ' ಸ್ವರೂಪವಾಗಿ ಎಂದು ಹೇಳಿದ್ದ ನ್ಯಾಯ ಪೀಠವು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತ್ತು.
ಇದನ್ನೂ ಓದಿ: ಪಿಟಿ ಉಷಾ ಅವರೇ ನಮಗೆ ಸ್ಫೂರ್ತಿ.. ಆದರೆ, ಅವರ ಹೇಳಿಕೆ ಸಂವೇದನಾರಹಿತ: ಕುಸ್ತಿಪಟುಗಳ ಅತೃಪ್ತಿ
ಎರಡನೇ ಹಂತದ ಪ್ರತಿಭಟನೆ: ಡಬ್ಲ್ಯುಎಫ್‌ಐ ಮುಖ್ಯಸ್ಥರಾದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಕಳೆದ ಜನವರಿಯಲ್ಲಿ ಮೊದಲ ಬಾರಿಗೆ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು.
ಆಗ ಎಚ್ಚೆತ್ತ ಕೇಂದ್ರ ಸರ್ಕಾರವು ಡಬ್ಲ್ಯುಎಫ್‌ಐ ಮತ್ತು ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಮೇಲುಸ್ತುವಾರಿ ಸಮತಿಯನ್ನು ರಚಿಸಿತ್ತು. ಮತ್ತೊಂದೆಡೆ, ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪೊಲೀಸರಿಗೆ ದೂರು ಸಹ ನೀಡಿದ್ದರು. ಆದರೆ, ಇದುವರೆಗೂ ಡಬ್ಲ್ಯುಎಫ್‌ಐ ವಿರುದ್ಧ ಆಗಲಿ ಅಥವಾ ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧವಾಗಲಿ ಪೊಲೀಸರು ಯಾವುದೇ ಕೇಸ್ ದಾಖಲಿಸಿಲ್ಲ ಎಂದು ಕುಸ್ತಿಪಟುಗಳು ಆರೋಪ ಮಾಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಭಾನುವಾರದಿಂದ ಎರಡನೇ ಹಂತದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಪ್ರಧಾನಿ ಮೋದಿ ಅವರಿಗೂ ಮನವಿ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಪ್ರತಿಯೊಬ್ಬರ ಮನ್ ಕಿ ಬಾತ್ ಅನ್ನು ಕೇಳುತ್ತಾರೆ. ನಮ್ಮ ಮನ್ ಕಿ ಬಾತ್ ಕೇಳಲು ಆಗುವುದಿಲ್ಲವೇ ಎಂದೂ ಪ್ರತಿಭಟನಾನಿರತ ಮಹಿಳಾ ಕುಸ್ತಿಪಟುಗಳು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ದಯವಿಟ್ಟು ನಮ್ಮ 'ಮನ್ ಕಿ ಬಾತ್' ಕೇಳಿ: ಪ್ರಧಾನಿ ಮೋದಿಗೆ ಕುಸ್ತಿಪಟುಗಳ ಮನವಿ