ದರ್ಭಾಂಗ್ (ಬಿಹಾರ): ಬಿಹಾರದ ದರ್ಭಾಂಗಾನಲ್ಲಿ ದೋಣಿ ಮುಳುಗಿ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಮಲಾ ನದಿಯಲ್ಲಿ ದೋಣಿ ಮಗುಚಿದ್ದು, ಇಬ್ಬರು ಮಹಿಳೆಯರು ಸೇರಿ ಮೂವರು ಮಕ್ಕಳು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇಲ್ಲಿಯ ಝಜ್ರಾ ಮತ್ತು ಗಧೇಪುರ ನಡುವಿನ ಶಹಪುರ್ ಚೌರ್‌ನಲ್ಲಿ ಘಟನೆ ನಡೆದಿದೆ. ಮಾಹಿತಿ ಪಡೆದು ಸ್ಥಳೀಯರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕುಶೇಶ್ವರಸ್ಥಾನ ಬಿಡಿಒ ಕಿಶೋರ್ ಕುಮಾರ್ ಘಟನೆ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕೆಂದು ಬ್ಲಾಕ್ ಡೆವೆಲಪ್ಮೆಂಟ್ ಆಫೀಸರ್ ತಿಳಿಸಿದ್ದಾರೆ.
ಸಂಜೆ 4 ಗಂಟೆಗೆ ಘಟನೆ: ಸಿಕ್ಕಿರುವ ಮಾಹಿತಿ ಪ್ರಕಾರ ಇಂದು ಸಂಜೆ 4 ಗಂಟೆಗೆ ಘಟನೆ ವರದಿಯಾಗಿದೆ. ದೋಣಿಯಲ್ಲಿ 10ಕ್ಕೂ ಹೆಚ್ಚು ಮಂದಿ ಝಜ್ರಾ ಹಾತ್‌ಗೆ ತೆರಳುತ್ತಿದ್ದರು. ಈ ವೇಳೆ ಜೋರಾದ ಗಾಳಿ ಬೀಸಿದ ಪರಿಣಾಮ ಸಮತೋಲನ ಆಗದೇ ಬೋಟ್ ಹಠಾತ್ತನೆ ಮಗುಚಿ ಬಿದ್ದಿದ್ದು, ದೋಣಿಯಲ್ಲಿದ್ದ ಅಷ್ಟು ಜನರು ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಕಂಡ ಸ್ಥಳೀಯರು ಕೂಡಲೇ ನದಿಗೆ ಹಾರಿ ರಕ್ಷಣೆ ಕಾರ್ಯಕ್ಕೆ ಮುಂದಾಗಿದ್ದಾರೆ. ಐವರುನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದ ಐವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರು ಮಹಿಳೆಯರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಜಗತರ್ಣಿ ದೇವಿ (55), ಪುಲ್ಪರಿ ದೇವಿ (60), ಸೋನಾಲಿ ಕುಮಾರಿ (13), ಕಲ್ಪನಾ ಕುಮಾರಿ (12) ಮತ್ತು ಸೋನಿಯಾ ಕುಮಾರಿ (11) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉತ್ತರ ಪ್ರದೇಶದಲ್ಲೂ ನಡೆದಿದ್ದ ಘಟನೆ: ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಸಾಮಾರ್ಥ್ಯಕಿಂತಲೂ ಅಧಿಕ ಜನರನ್ನು ಹೊತ್ತು ಸಾಗುತ್ತಿದ್ದ ವೇಳೆ ಗಂಗಾನದಿಯಲ್ಲಿ ದೋಣಿ ಮಗುಚಿ ಬಿದ್ದು, ನಾಲ್ವರು ಸಾವನ್ನಪ್ಪಿದ್ದರು. ಬಲಿಯಾ ನಗರದ ಮಾಲ್ದೇಪುರ ಎಂಬಲ್ಲಿ ಈ ದುರಂತ ನಡೆದಿತ್ತು. ಮುಂಡನ್ ಸಂಸ್ಕಾರದ ವೇಳೆ ಗಂಗಾ ನದಿಯಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಜನರನ್ನು ಸಾಗಿಸುತ್ತಿದ್ದಾಗ ದೋಣಿ ಮಗುಚಿತ್ತು.
ಕೇರಳದಲ್ಲೂ ನಡೆದಿದ್ದ ದುರಂತ: ಕೆಲ ದಿನಗಳ ಹಿಂದೆ ದೋಣಿ ಮುಳುಗಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದ ಘಟನೆ ಕೊಟ್ಟಾಯಂನಲ್ಲಿ ವೈಕಂನ ತಲಯಾಝಂ ಚೆಟ್ಟಿಕ್ಕರಿ ಪ್ರದೇಶದಲ್ಲಿ ನಡೆದಿತ್ತು. ಒಂದೇ ಕುಟುಂಬದ ಆರು ಮಂದಿ ಪ್ರಯಾಣಿಸುತ್ತಿದ್ದ ದೋಣಿ ಮಗುಚಿ ಬಿದ್ದಿತ್ತು. ಪುತ್ತಂತರ ಶರತ್ ಮತ್ತು ಐವಾನ್ ಎಂಬ ಬಾಲಕ ಮೃತಪಟ್ಟಿದ್ದರು.
ಇದನ್ನೂ ಓದಿ: ಕೇರಳದಲ್ಲಿ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಡೆ : 18 ಮಂದಿ ದುರ್ಮರಣ