ರಜೌರಿ (ಜಮ್ಮು ಮತ್ತು ಕಾಶ್ಮೀರ) : ಇಲ್ಲಿನ ರಾಜೌರಿ ಜಿಲ್ಲೆಯ ಸೇನಾ ಶಿಬಿರದೊಳಗೆ ಅಧಿಕಾರಿಯೊಬ್ಬರು ತನ್ನ ಸಹಚರರ ಮೇಲೆ ಗುಂಡು ಹಾರಿಸಿ ಗ್ರೆನೇಡ್ ಎಸೆದ ಘಟನೆ ನಡೆದಿದೆ. ಪರಿಣಾಮ ಮೂವರು ಅಧಿಕಾರಿಗಳು ಸೇರಿದಂತೆ ಐವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾಳಿ ನಡೆಸಿದ ಆರೋಪಿ ಅಧಿಕಾರಿಯು ಶರಣಾಗತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇಜರ್ ದರ್ಜೆಯವರೆಂದು ಹೇಳಲಾದ ಅಧಿಕಾರಿಯು ಶೂಟಿಂಗ್ ಅಭ್ಯಾಸದ ಸಮಯದಲ್ಲಿ ತನ್ನ ಸಹೋದ್ಯೋಗಿಗಳ ಮೇಲೆ ಯಾವುದೇ ಪ್ರಚೋದನೆಯಿಲ್ಲದೇ ಗುಂಡು ಹಾರಿಸಿದ್ದಾನೆ. ಶಿಬಿರದಲ್ಲಿ ಕಳೆದ ಹಲವು ದಿನಗಳಿಂದ ಗುಂಡಿನ ದಾಳಿ ಅಭ್ಯಾಸ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಗುರುವಾರ ಆರೋಪಿ ಅಧಿಕಾರಿಯು ಯಾವುದೇ ಪ್ರಚೋದನೆ ಇಲ್ಲದೇ ತನ್ನ ಸಹೋದ್ಯೋಗಿಗಳು ಮತ್ತು ಅಧೀನ ಅಧಿಕಾರಿಗಳ ಮೇಲೆ ಗುಂಡು ಹಾರಿಸಲು ಆರಂಭಿಸಿದ್ದಾರೆ. ಇದಾದ ನಂತರ ಓಡಿಹೋಗಿ ಶಿಬಿರದ ಆಯುಧಾಲಯದಲ್ಲಿ ಅಡಗಿಕೊಂಡಿದ್ದಾನೆ. ಈ ವೇಳೆ, ಕಮಾಂಡಿಂಗ್ ಆಫೀಸರ್, ಅವರ ಉಪ ಮತ್ತು ವೈದ್ಯಕೀಯ ಅಧಿಕಾರಿಗಳು ಶಸ್ತ್ರಾಗಾರಕ್ಕೆ ತೆರಳಿ ಆರೋಪಿಗೆ ಶರಣಾಗುವಂತೆ ಮನವೊಲಿಸಲು ಮುಂದಾದಾಗ ಆತ ಗ್ರೆನೇಡ್‌ಗಳನ್ನು ಎಸೆಯಲು ಪ್ರಾರಂಭಿಸಿದ್ದಾನೆ.
ಸೇನಾ ಮೂಲಗಳ ಪ್ರಕಾರ, ಆರೋಪಿ ಎಸೆದ ಗ್ರೆನೇಡ್ ಸ್ಫೋಟಗೊಂಡು ಆತನನ್ನು ಸಮಾಧಾನ ಪಡಿಸಲು ತೆರಳಿದ್ದ ಮೂವರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಅಧಿಕಾರಿಗಳಲ್ಲದೇ, ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಸುಮಾರು 8 ಗಂಟೆಗಳ ನಂತರ ಆರೋಪಿ ಅಧಿಕಾರಿಯನ್ನು ಶಸ್ತ್ರಾಗಾರದೊಳಗೆ ನಿಯಂತ್ರಿಸಲಾಯಿತು ತಿಳಿಸಿದೆ.
ಇದನ್ನೂ ಓದಿ : DIG Suicide: ಗುಂಡು ಹಾರಿಸಿಕೊಂಡು ಕೊಯಮತ್ತೂರು ಡಿಐಜಿ ವಿಜಯಕುಮಾರ್ ಆತ್ಮಹತ್ಯೆ
ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಶಿಬಿರದಲ್ಲಿ ಕಳೆದ ಹಲವು ದಿನಗಳಿಂದ ಗುಂಡು ಹಾರಿಸುವ ಅಭ್ಯಾಸ ನಡೆಸಲಾಗುತ್ತಿದೆ. ಘಟನೆಯು ರಾಜೌರಿ ಜಿಲ್ಲೆಯ ಥಾನಮಂಡಿ ಬಳಿಯ ನೀಲಿ ಚೌಕಿಯಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸೇನೆಯು ಮುನ್ನೆಚ್ಚರಿಕಾ ಕ್ರಮವಾಗಿ ಶಸ್ತ್ರಾಗಾರದ ಸಮೀಪವಿರುವ ಗ್ರಾಮವನ್ನು ಸ್ಥಳಾಂತರಿಸಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : Bihar firing: ಕೋರ್ಟ್ ಆವರಣಕ್ಕೆ ನುಗ್ಗಿ ಕೈದಿಗಳ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು
ಈ ಬಗ್ಗೆ ಜಮ್ಮು ಮೂಲದ ರಕ್ಷಣಾ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ಮಾಹಿತಿ ನೀಡಿದ್ದು, ಜನರಲ್ ಏರಿಯಾ ರಾಜೌರಿಯಲ್ಲಿರುವ ಸೇನಾ ಶಿಬಿರದ ಮೇಲೆ ಕೆಲವು ಗುಂಡಿನ/ಭಯೋತ್ಪಾದಕ ದಾಳಿ ನಡೆಸುವ ಕುರಿತು ನನಗೆ ಕರೆಗಳು ಬಂದಿವೆ. ಆದರೆ, ಯಾವುದೇ ಭಯೋತ್ಪಾದಕ ದಾಳಿ ನಡೆದಿಲ್ಲ. ರಾತ್ರಿ 11 ಗಂಟೆ ಸುಮಾರಿಗೆ ಆರೋಪಿ ನಡೆಸಿದ ವಿವೇಚನಾರಹಿತ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಶಿಬಿರದ ಒಳಗೆ ನಡೆದ ಆಂತರಿಕ ಘಟನೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಪತ್ನಿ, ಇಬ್ಬರು ಪುತ್ರಿಯರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ಟೇಬಲ್!