ಹಿಸಾರ್ (ಹರಿಯಾಣ): ಮದುವೆ ಸಮಾರಂಭದಿಂದ ವಾಪಸಾಗುತ್ತಿದ್ದಾಗ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನ ಯುವಕರು ಸಾವನ್ನಪ್ಪಿರುವ ದುರ್ಘಟನೆ ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದ್ದು, ಕಾರಿನಲ್ಲಿದ್ದ ಆರು ಯುವಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾದರೆ ಮೃತಪಟ್ಟಿದ್ದಾರೆ.
ಮೃತ ಎಲ್ಲ ಯುವಕರು 22ರಿಂದ 25 ವರ್ಷ ವಯಸ್ಸಿನ ಒಳಗಿನವರಾಗಿದ್ದಾರೆ. ಎಲ್ಲರೂ ಒಳ್ಳೆಯ ಸ್ನೇಹಿತರಾಗಿದ್ದರು. ಮೃತರನ್ನು ಸಾಗರ್ (23), ಶೋಭಿತ್ (22), ಅಶೋಕ್ (25), ದೀಪಕ್ ( 23), ಅಭಿನವ್ (22) ಹಾಗೂ ಭೂನೇಶ್ ಎಂದು ಗುರುತಿಸಲಾಗಿದೆ. ಭೂನೇಶ್ ತಮ್ಮ ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದ ಎಂದೂ ತಿಳಿದು ಬಂದಿದೆ.
ಆದಂಪುರದಲ್ಲಿ ಮದುವೆಗೆಂದು ಕಾರಿನಲ್ಲಿ ಒಟ್ಟು ಎಂಟು ಜನ ಸ್ನೇಹಿತರು ತೆರಳಿದ್ದರು. ಗುರುವಾರ ರಾತ್ರಿ ಎಲ್ಲರೂ ವಾಪಸಾಗುತ್ತಿದ್ದರು. ಆದರೆ, ಈ ವೇಳೆ ಅಗ್ರೋಹ ಮೋಡ್ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಆತ ಕೂಡ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲ ಮೃತರ ದೇಹಗಳ ಮರಣೋತ್ತರ ಪರೀಕ್ಷೆಯನ್ನು ಹಿಸಾರ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಅಪಘಾತಕ್ಕೀಡಾದ ಕಾರು ಮೃತರಲ್ಲಿ ಒಬ್ಬ ಸ್ನೇಹಿತನದ್ದಾಗಿದೆ. ಈ ದುರ್ಘಟನೆ ವೇಳೆ ಕಾರು ಯಾರು ಚಲಾಯಿಸುತ್ತಿದ್ದರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಕಾಲುವೆಗೆ ಉರುಳಿ ಬಿದ್ದ ಬೊಲೆರೋ ವಾಹನ: 7 ಮಂದಿ ಸಾವು
ಸಿರ್ಸಾ ಜಿಲ್ಲೆಯಲ್ಲಿ ಆರು ಜನ ಸಾವು: ಮತ್ತೊಂದೆಡೆ, ನಿನ್ನೆ ರಾಮ ನವಮಿಯ ದಿನದಂದು ಸಿರ್ಸಾ ಜಿಲ್ಲೆಯಲ್ಲೂ ಇಂತಹದ್ದೇ ಭೀಕರ ರಸ್ತೆ ಅಪಘಾತ ನಡೆದಿದೆ. ಇಲ್ಲಿನ ನೆಜಡೆಲಾ ಗ್ರಾಮದ ಬಳಿ ಗುರುವಾರ ಸಂಜೆ ಸ್ಕೋಡಾ ಮತ್ತು ಆಲ್ಟೋ ಕಾರು ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇದರಲ್ಲಿ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಪಂಜಾಬ್‌ನ ಸರ್ದುಲ್‌ಗಢ ನಿವಾಸಿ ಗುರ್ತೇಜ್ ಸಿಂಗ್ ಎಂಬುವವರು ತಮ್ಮ ಪತ್ನಿ ಪರಮ್‌ಜಿತ್ ಕೌರ್, 6 ವರ್ಷದ ಮಗಳು ಗುಂತಜ್ ಕೌರ್, 6 ತಿಂಗಳ ಮಗ ಸುಖತಾಜ್ ಸಿಂಗ್ ಮತ್ತು ಸೊಸೆಯೊಂದಿಗೆ ಸಿರ್ಸಾದಿಂದ ಸರ್ದುಲ್‌ಗಢಕ್ಕೆ ಆಲ್ಟೊ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಗುರ್ತೇಜ್ ಕಾರು ಚಲಾಯಿಸುತ್ತಿದ್ದರು. ಅದೇ ಸಮಯದಲ್ಲಿ ಎದುರುಗಡೆಯಿಂದ ಬಂದ ಸ್ಕೋಡಾ ಕಾರಿಗೆ ಆಲ್ಟೊ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಸಂಪೂರ್ಣ ಜಖಂಗೊಳಿಸಿವೆ. ಇದರಲ್ಲಿ ಗುರ್ತೇಜ್ ಸಿಂಗ್ ಕುಟುಂಬದ ನಾಲ್ವರು ಹಾಗೂ ಸ್ಕೋಡಾ ಕಾರು ಚಾಲಕ ಸಹ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ.