ಲಲಿತಪುರ (ಉತ್ತರ ಪ್ರದೇಶ): 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜಿಲ್ಲಾ ಅಧ್ಯಕ್ಷರು ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತಿಲಕ್ ಯಾದವ್, ಬಿಎಸ್ಪಿ ಜಿಲ್ಲಾ ಅಧ್ಯಕ್ಷ ದೀಪಕ್ ಅಹಿರ್ವಾರ್ ಮತ್ತು ಕಿರಿಯ ಎಂಜಿನಿಯರ್ (ಜೆಇ) ಮಹೇಂದ್ರ ದುಬೆ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ತಲೆಮರೆಸಿಕೊಂಡಿದ್ದ ಈ ಮೂವರೂ ಕೂಡಾ ಮಿರ್ಜಾಪುರದಲ್ಲಿ ಹೋಟೆಲ್ನಲ್ಲಿ ತಂಗಿದ್ದರು. ನಿಖರ ಮಾಹಿತಿ ಆಧರಿಸಿ ಹೋಟೆಲ್ ಮೇಲೆ ದಾಳಿ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳು ವಕೀಲರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು ಎಂದು ಲಲಿತಪುರದ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಪಾಠಕ್ ಹೇಳಿದ್ದಾರೆ.
'ನಮ್ಮ ಎಸ್ಒಜಿ ತಂಡವು ಮೂವರು ಪ್ರಮುಖ ಆರೋಪಿಗಳನ್ನು ಮಿರ್ಜಾಪುರದಲ್ಲಿ ಬಂಧಿಸಿದೆ. ಈವರೆಗೆ ಪ್ರಕರಣದ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಹಿಡಿಯಲು ನಮ್ಮ ತಂಡಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ' ಎಂದು ನಿಖಿಲ್ ಪಾಠಕ್ ಮಾಹಿತಿ ನೀಡಿದ್ದಾರೆ.
ಕಳೆದ ವಾರ, 17 ವರ್ಷದ ಬಾಲಕಿಯೊಬ್ಬಳು ತನ್ನ ತಂದೆ, ಎಸ್‌ಪಿ ಮತ್ತು ಬಿಎಸ್‌ಪಿಯ ಪಕ್ಷದ ಮುಖಂಡರು ಮತ್ತು ಹತ್ತಿರದ ಸಂಬಂಧಿಗಳು ಕೆಲವು ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಳು. ತಂದೆಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ತಂದೆ, ಎಸ್‌ಪಿ, ಬಿಎಸ್ಪಿ ಕಾರ್ಯಕರ್ತರಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಭದ್ರತೆ