ನವದೆಹಲಿ: ಮಹಾರಾಷ್ಟ್ರದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಏಳು ಜನರನ್ನು ಬಂಧಿಸಿ, ಸುಮಾರು 32 ಕೋಟಿ ರೂಪಾಯಿ ಮೌಲ್ಯದ 61 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
![seven-held-with-61-kg-gold-worth-rs-32-cr-at-mumbai-airport](https://etvbharatimages.akamaized.net/etvbharat/prod-images/16917814_thum1111.jpg)
ಶುಕ್ರವಾರ ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣಗಳು ನಡೆದಿದ್ದು, ಮುಂಬೈ ಏರ್‌ಪೋರ್ಟ್ ಕಸ್ಟಮ್ಸ್‌ನ ಇತಿಹಾಸದಲ್ಲೇ ಒಂದೇ ದಿನದಲ್ಲಿ ನಡೆದ ಅತಿ ದೊಡ್ಡ ಜಪ್ತಿ ಕಾರ್ಯ ಇದಾಗಿದೆ. ಮೊದಲ ಪ್ರಕರಣದಲ್ಲಿ ತಾಂಜೆನಿಯಾದಿಂದ ಬಂದಿಳಿದ ಭಾರತದ ರಾಷ್ಟ್ರೀಯತೆ ಹೊಂದಿದ ನಾಲ್ವರು ಪ್ರಯಾಣಿಕರನ್ನು ತಪಾಸಣೆ ನಡೆಸಲಾಗಿದೆ. ಈ ವೇಳೆ ಕಳ್ಳಸಾಗಣೆ ಮಾಡಿದ ಚಿನ್ನದ ಬಿಸ್ಕಟ್ಗಳನ್ನು ತಲಾ 1 ಕೆಜಿಯಂತೆ ಬಹು ಪಾಕೆಟ್‌ಗಳೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಸೊಂಟದ ಬೆಲ್ಟ್‌ಗಳಲ್ಲಿ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.
![seven-held-with-61-kg-gold-worth-rs-32-cr-at-mumbai-airport](https://etvbharatimages.akamaized.net/etvbharat/prod-images/16917814_thum11222.jpg)
ಈ ನಾಲ್ವರು ಪ್ರಯಾಣಿಕರಿಂದ 28.17 ಕೋಟಿ ಮೌಲ್ಯದ ಒಟ್ಟು 53 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತಿಯೊಬ್ಬರಲ್ಲಿ ಕ್ರಮವಾಗಿ 12, 13, 14 ಮತ್ತು 14 ಕೆಜಿ ಚಿನ್ನ ದೊರೆತಿದೆ. ಯುಎಇಯಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೆಲ್ಟ್‌ಗಳ ಒಳಗೆ ಬಚ್ಚಿಟ್ಟಿದ್ದ ಚಿನ್ನದ ಬಿಸ್ಕಟ್ಗಳನ್ನು ಸುಡಾನ್ ಪ್ರಜೆಯೊಬ್ಬರು ದೋಹಾ ವಿಮಾನ ನಿಲ್ದಾಣದಲ್ಲಿ ಈ ನಾಲ್ವರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಎಲ್ಲ ನಾಲ್ವರು ಪ್ರಯಾಣಿಕರನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ಮತ್ತೊಂದು ಪ್ರಕರಣದಲ್ಲಿ ಗುಪ್ತಚರ ಮಾಹಿತಿ ಆಧರಿಸಿ ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ಮೂವರು ಪ್ರಯಾಣಿಕರಿಂದ 3.88 ಕೋಟಿ ಮೌಲ್ಯದ 8 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಮೂವರು ಪ್ರಯಾಣಿಕರು ದುಬೈನಿಂದ ವಿಸ್ತಾರಾ ವಿಮಾನದ ಮೂಲಕ ಬಂದಿದ್ದರು.
ಈ ಪ್ರಯಾಣಿಕರು ತಾವು ಧರಿಸುತ್ತಿದ್ದ ಜೀನ್ಸ್ ಪ್ಯಾಂಟ್‌ನ ಸೊಂಟದ ಪಟ್ಟಿಯಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದರು. ಮೂವರು ಪ್ರಯಾಣಿಕರಲ್ಲಿ 60 ವಯಸ್ಸಿನ ಓರ್ವ ಮಹಿಳೆ ಗಾಲಿ ಕುರ್ಚಿಯಲ್ಲಿದ್ದರು. ಈ ಮೂವರನ್ನೂ ಕೂಡ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾನೂನು ದಬ್ಬಾಳಿಕೆಯ ಸಾಧನವಾಗಬಾರದು: ಸಿಜೆಐ ಡಿವೈ ಚಂದ್ರಚೂಡ್