ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣ ಬಲ ಬಳಕೆ ತಡೆಗೆ ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಹೇಳಿದ ಭಾರತೀಯ ಚುನಾವಣಾ ಆಯೋಗವು (ಇಸಿಐ) ಚುನಾವಣಾ ಸಮಯದಲ್ಲಿ ಚುನಾವಣಾ ವೆಚ್ಚದ ಮೇಲ್ವಿಚಾರಣೆಗಾಗಿ ದೃಢ ಕಾರ್ಯವಿಧಾನವನ್ನು ಪರಿಚಯಿಸಲಾಗುತ್ತಿದೆ ಎಂದು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಚುನಾವಣೆಗಳ ಸಂದರ್ಭಗಳಲ್ಲಿ ಆಯೋಗ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮಗಳು ಮತ್ತು ಅವಿರತ ಪ್ರಯತ್ನಗಳೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಕಾನೂನು ಜಾರಿ ಇಲಾಖೆಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಂದ ಅಧಿಕ ಚುನಾವಣಾ ವೆಚ್ಚವನ್ನು ತಡೆಗಟ್ಟಲು ಸಮಗ್ರ ಯೋಜನೆ ಮತ್ತು ತಪ್ಪಿತಸ್ಥ ಅಭ್ಯರ್ಥಿಗಳು ಮತ್ತು ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಪ್ರಭಾಕರ ದೇಶಪಾಂಡೆ ಎಂಬವರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಾತ್ಮಕವಾಗಿ ಆಯೋಗವು ಕೋರ್ಟ್‌ಗೆ ಈ ವಿವರ ನೀಡಿದೆ. ಐಐಟಿ ಪದವೀಧರ ಪ್ರಭಾಕರ್ ದೇಶಪಾಂಡೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 2019ರಲ್ಲಿ ದೆಹಲಿಯ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಕಾನೂನು ಮಿತಿಯಲ್ಲಿ ನಿಗದಿಪಡಿಸಿದ್ದಕ್ಕಿಂತ ಅಧಿಕ ಮೊತ್ತವನ್ನು ಅಭ್ಯರ್ಥಿಗಳು ಬಳಸುತ್ತಿದ್ದಾರೆ. ಈ ವರದಿಯ ಆಧಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅವರು ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಚುನಾವಣೆಗಳು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆ ತರಲು ಚುನಾವಣಾ ಆಯೋಗ ಅಧಿಕ ವೆಚ್ಚ ತಡೆಯಲು ಸಮಗ್ರ ಕ್ರಿಯಾಯೋಜನೆ ರೂಪಿಸಬೇಕು. ಅಧಿಕ ವೆಚ್ಚ ಮಾಡುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಅರ್ಜಿಯಲ್ಲಿ ಆಗ್ರಹಿಸಿದ್ದರು. ಈ ಸಂಬಂಧ ಈಗಾಗಲೇ ಆಯೋಗ ನಿಯಂತ್ರಣ ವ್ಯವಸ್ಥೆ ಹೊಂದಿದ್ದು, ಅರ್ಜಿ ವಜಾಗೊಳಿಸುವಂತೆ ಆಯೋಗ ಕೋರಿತು. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬೇಲಾ ಎಂ.ತ್ರಿವೇದಿಯವರಿದ್ದ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿತ್ತು.
'ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲದ ಬಗ್ಗೆ ಭಾರತದ ಚುನಾವಣಾ ಆಯೋಗವು ಗಂಭೀರವಾಗಿ ಚಿಂತಿಸುತ್ತಿದೆ. ಈ ಅಪಾಯವನ್ನು ನಿಗ್ರಹಿಸಲು ಬಿಹಾರ ವಿಧಾನಸಭೆ, 2010ರ ಸಾರ್ವತ್ರಿಕ ಚುನಾವಣೆಗಳ ನಂತರ ನಡೆದ ಚುನಾವಣೆಗಳಲ್ಲಿ ಚುನಾವಣಾ ವೆಚ್ಚದ ಮಾನಿಟರಿಂಗ್ ಕಾರ್ಯವಿಧಾನವನ್ನು ಚು.ಆಯೋಗವು ಪರಿಣಾಮಕಾರಿಯಾಗಿ ಮತ್ತು ಅನುಕ್ರಮವಾಗಿ ಜಾರಿಗೊಳಿಸಿದೆ.'
'ಚುನಾವಣಾ ವೆಚ್ಚವನ್ನು ಚುನಾವಣಾ ನಿಯಮಗಳು, 1961ರ ನಿಯಮ 90 ರ ಅಡಿಯಲ್ಲಿ ಸೂಚಿಸಲಾದ ಶಾಸನಬದ್ಧ ಮಿತಿಯೊಳಗೆ ಇರಿಸಲು ಮತ್ತು ಹೆಚ್ಚುವರಿ ಖರ್ಚು/ಲೆಕ್ಕಕ್ಕೆ ಬಾರದ ವೆಚ್ಚ ತಡೆಯಲು ಚು.ಆಯೋಗವು ಚುನಾವಣಾ ವೆಚ್ಚದ ಮೇಲ್ವಿಚಾರಣೆಗಾಗಿ ಕಾರ್ಯವಿಧಾನವನ್ನು ಪರಿಚಯಿಸಿದೆ' ಎಂದು ಆಯೋಗವು ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಿವರಿಸಿದೆ. ಚುನಾವಣಾ ಆಯೋಗವು ಚುನಾವಣೆಗಳಲ್ಲಿ ಹಣ ಬಲದ ಹಾವಳಿ ತಡೆಯಲು ಹಲವು ಬಾರಿ ವಿಶೇಷ ಕ್ರಮಗಳನ್ನು ಅಳವಡಿಸಿಕೊಂಡಿದೆ. ಭವಿಷ್ಯದಲ್ಲಿಯೂ ಇದು ಮುಂದುವರಿಯಲಿದೆ ಎಂದು ಭರವಸೆ ಕೊಟ್ಟಿದೆ.
ಇದನ್ನೂ ಓದಿ: ಕೇಂದ್ರ ಚು.ನಾವಣಾ ಆಯೋಗದ ನೂತನ ಆಯುಕ್ತರಾಗಿ ಅರುಣ್ ಗೋಯೆಲ್ ಅಧಿಕಾರ ಸ್ವೀಕಾರ