ಬಥಿಂಡಾ(ಪಂಜಾಬ್): ಶಿರೋಮಣಿ ಅಕಾಲಿದಳದ ಜಲೇರ್ ಸಮಿತಿಯ ಸದಸ್ಯ, ಹಿರಿಯ ಉಪಾಧ್ಯಕ್ಷ ಹಾಗೂ ಮಾಜಿ ಕ್ಯಾಬಿನೆಟ್ ಸಚಿವ ಜತೇದಾರ್ ತೋಟಾ ಸಿಂಗ್ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗ್ಗೆ ಮುಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತೋಟಾ ಸಿಂಗ್ ನಿಧನ: ಜತೇದಾರ್ ತೋಟಾ ಸಿಂಗ್ ಅವರು ಫೋರ್ಟಿಸ್ ಆಸ್ಪತ್ರೆಯಲ್ಲಿ ಬಹಳ ಸಮಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಮತ್ತು ಸ್ನೇಹಿತರಾಗಿರುವ ಸುಖಬೀರ್ ಸಿಂಗ್ ಬಾದಲ್ ಆಸ್ಪತ್ರೆಗೆ ಭೇಟಿ ನೀಡಿ ತೋಟಾ ಸಿಂಗ್ ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ತಿಳಿದುಕೊಂಡಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಸಿಂಗ್ ಅವರು ಇಂದು ಬೆಳಗ್ಗೆ ನಿಧನರಾದರು.
ಸುಖಬೀರ್ ಸಿಂಗ್ ಸಂತಾಪ: ತೋಟಾ ಸಿಂಗ್ ಅಗಲಿಕೆಗೆ ಸುಖಬೀರ್ ಸಿಂಗ್ ಅವರು ಕಂಬನಿ ಮಿಡಿದ್ದಾರೆ. ಶಿರೋಮಣಿ ಅಕಾಲಿದಳದ ಜಲೇರ್ ಸಮಿತಿಯ ಸದಸ್ಯ, ಸ್ನೇಹಿತ, ಪಂಜಾಬ್‌ನ ಮಾಜಿ ಸಚಿವ ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಸದಸ್ಯ ಜತೇದಾರ್ ತೋಟ ಸಿಂಗ್ ಅಗಲಿಕೆಯಿಂದ ಪಕ್ಷಕ್ಕೆ ತುಂಬ ನಷ್ಟವಾಗಿದೆ. ವೈಯಕ್ತಿಕವಾಗಿ ನಾನು ಯಾವಾಗಲೂ ಉತ್ತಮ ಮಾರ್ಗದರ್ಶನದ ಕೊರತೆಯನ್ನು ಅನುಭವಿಸುತ್ತೇನೆ ಎಂದು ಕಣ್ಣೀರು ಹಾಕಿದರು. ಅದರಂತೆ ಅನೇಕ ಗಣ್ಯರು ಸಹ ತೋಟಾ ಸಿಂಗ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಓದಿ: ಬಹುಭಾಷಾ ನಟ ಕ್ಯಾಪ್ಟನ್ ಚಲಪತಿ ಚೌದ್ರಿ ವಿಧಿವಶ
ಜೀವನ ಪಯಣ: ತೋಟಾ ಸಿಂಗ್ ಅವರು ಮಾರ್ಚ್ 2, 1941 ರಂದು ಮೋಗಾ ಜಿಲ್ಲೆಯ ದಿದರ್ ಸಿಂಗ್ ವಾಲಾ ಗ್ರಾಮದಲ್ಲಿ ಜನಿಸಿದರು. ಬಾಬು ಸಿಂಗ್ ಅವರ ಮಗ ಜತೇದಾರ್ ತೋಟಾ ಸಿಂಗ್ ತಮ್ಮ ಗ್ರಾಮದ ಶಾಲೆಯಲ್ಲೇ ಶಿಕ್ಷಣವನ್ನು ಪೂರ್ಣಗೊಳಿಸಿದರು. ಹೆಚ್ಚಿನ ವಿದ್ಯಾಭ್ಯಸಕ್ಕಾಗಿ ಅವರು ಮೊಗಾದ DM ಕಾಲೇಜಿಗೆ ಸೇರಿದ್ದರು.
ರಾಜಕೀಯ ಪಯಣ: ಸುರ್ಜಿತ್ ಸಿಂಗ್ ಬರ್ನಾಲಾ ಅವರ ಸರ್ಕಾರದ ಅವಧಿಯಲ್ಲಿ ಜತೇದಾರ್ ತೋಟ ಸಿಂಗ್ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಅವರು ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದರು. 1993 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮೊಗಾದಿಂದ ಶಾಸಕರಾಗಿ ಆಯ್ಕೆಯಾದರು. ಇದಾದ ನಂತರ ಮತ್ತೆ 2002ರಲ್ಲಿ ಸಿಂಗ್ ಮೊಗಾದಿಂದಲೇ ಶಾಸಕರಾಗಿ ಆಯ್ಕೆಯಾದರು.
2002ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಅವರಿಗೆ ಅಕಾಲಿ ದಳ-ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವ ಸ್ಥಾನ ನೀಡಲಾಗಿತ್ತು. 2012ರಲ್ಲಿ ತೋಟಾ ಸಿಂಗ್ ಅವರು ಧರ್ಮಕೋಟ್‌ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.