ನವದೆಹಲಿ: ಕೇಂದ್ರೀಯ ತನಿಖಾ ದಳದ ನೂತನ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಅವರನ್ನು ಮೇ 14ರಂದು ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನೇಮಿಸಿದೆ. ಹಾಲಿ ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅಧಿಕಾರಾವಧಿ ಇಂದಿಗೆ ಮುಕ್ತಾಯವಾಗಿದೆ.
ಸುಬೋಧ್ ಕುಮಾರ್ ಜೈಸ್ವಾಲ್ ಅವಧಿ ಮುಗಿಯುವ ಮುನ್ನ ಎಂದರೆ ಮೇ 13ರಂದು ಪ್ರಧಾನಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಸಿಬಿಐ ನಿರ್ದೇಶಕರ ಹುದ್ದೆಗೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಅಂತಿಮಗೊಳಿಸಿತ್ತು. ಕರ್ನಾಟಕದ ಡಿಜಿಪಿ ಆಗಿದ್ದ ಪ್ರವೀಣ್ ಸೂದ್, ಮಧ್ಯಪ್ರದೇಶದ ಡಿಜಿಪಿ ಸುಧೀರ್ ಸಕ್ಸೇನಾ ಮತ್ತು ಅಗ್ನಿಶಾಮಕ ಸೇವೆ, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಮಹಾನಿರ್ದೇಶಕ ತಾಜ್ ಹಾಸನ್ ಅವರ ಹೆಸರು ಸಿಬಿಐ ನಿರ್ದೇಶಕರ ಹುದ್ದೆಗೆ ಮಂಚೂಣಿಯಲ್ಲಿತ್ತು.
ಅಂತಿಮವಾಗಿ ಕರ್ನಾಟಕ ಕೇಡರ್‌ನ 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರನ್ನು ನೇಮಿಸಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿತ್ತು. 2024ರಲ್ಲಿ ಪ್ರವೀಣ್ ಸೂದ್ ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಆದರೆ, ಸಿಬಿಐ ನೂತನ ನಿರ್ದೇಶಕರಾಗಿ ನೇಮಿಸಿದ ಕಾರಣ ಈಗ ಎರಡು ವರ್ಷಗಳ ಅಧಿಕಾರಾವಧಿ ವಿಸ್ತರಣೆಗೊಂಡಂತೆ ಆಗಿದೆ.
ಪ್ರವೀಣ್ ಸೂದ್ ಪರಿಚಯ.. ಮೂಲತಃ ಹಿಮಾಚಲ ಪ್ರದೇಶದವರಾದ ಪ್ರವೀಣ್ ಸೂದ್ ಐಐಟಿ ದೆಹಲಿ, ಐಐಎಂ ಬೆಂಗಳೂರು ನ್ಯೂಯಾರ್ಕ್‌ನ ಸಿರಾಕ್ಯೂಸ್ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ್ದರು. 1989ರಲ್ಲಿ ಮೈಸೂರು ಎಎಸ್ಪಿಯಾಗಿ ವೃತ್ತಿ ಆರಂಭಿಸಿದ ಇವರು ಬಳ್ಳಾರಿ, ರಾಯಚೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. 1999ರಲ್ಲಿ ಮಾರಿಷಸ್ ದೇಶದ ಪೊಲೀಸ್ ಸಲಹೆಗಾರರಾಗಿಯೂ ಮೂರು ವರ್ಷ ಸೇವೆ ಸಲ್ಲಿಸಿದ್ದರು.
-
Former DGP of Karnataka Praveen Sood formally took over as Director of Central Bureau of Investigation, today.
— ANI (@ANI) May 25, 2023 " class="align-text-top noRightClick twitterSection" data="
">Former DGP of Karnataka Praveen Sood formally took over as Director of Central Bureau of Investigation, today.
— ANI (@ANI) May 25, 2023Former DGP of Karnataka Praveen Sood formally took over as Director of Central Bureau of Investigation, today.
— ANI (@ANI) May 25, 2023
ಬೆಂಗಳೂರು ನಗರದಲ್ಲಿ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಮತ್ತು ಮೈಸೂರು ನಗರದ ಪೊಲೀಸ್ ಕಮಿಷನರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಮೂರು ವರ್ಷಗಳ ಹಿಂದೆ ರಾಜ್ಯ ಡಿಜಿಪಿಯಾಗಿ ನೇಮಕಗೊಂಡಿದ್ದರು. 1996ರಲ್ಲಿ ಮುಖ್ಯಮಂತ್ರಿಗಳ ಪದಕ, 2002ರಲ್ಲಿ ಪೊಲೀಸ್ ಪದಕ ಹಾಗೂ 2011ರಲ್ಲಿ ರಾಷ್ಟ್ರಪತಿಗಳ ಪದಕಕ್ಕೂ ಪ್ರವೀಣ್ ಸೂದ್ ಭಾಜನರಾಗಿದ್ದರು.
ಅಲ್ಲದೇ, ಉತ್ತಮ ಟ್ರಾಫಿಕ್ ನಿರ್ವಹಣೆ ಮತ್ತು ನಾಗರಿಕರಿಗೆ ಸಮರ್ಥ ಸೇವೆಗಳನ್ನು ಒದಗಿಸಲು ತಂತ್ರಜ್ಞಾನವನ್ನು ಬಳಸುವ ಉಪಕ್ರಮಗಳು ಅವರಿಗೆ ಪ್ರಶಸ್ತಿಗಳನ್ನು ತಂದುಕೊಟ್ಟಿವೆ. 2011ರಲ್ಲಿ ಟ್ರಾಫಿಕ್ ನಿರ್ವಹಣೆಗಾಗಿ ತಂತ್ರಜ್ಞಾನದ ಅತ್ಯಂತ ನವೀನ ಬಳಕೆಗಾಗಿ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪದಕ ಪ್ರಶಸ್ತಿ ಮತ್ತು 2006ರಲ್ಲಿ ಪ್ರಿನ್ಸ್ ಮೈಕೆಲ್ ಇಂಟರ್ ನ್ಯಾಷನಲ್ ರಸ್ತೆ ಸುರಕ್ಷತೆ ಪ್ರಶಸ್ತಿ ಲಭಿಸಿತ್ತು. ನಮ್ಮ 100, ಪಿಂಕ್ ಹೊಯ್ಸಳ, ಸುರಕ್ಷಾ ಅಪ್ಲಿಕೇಶನ್ನಂತಹ ಪ್ರಯೋಗಗಳು ಪ್ರವೀಣ್ ಸೂದ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ಜಾರಿಯಾಗಿದ್ದವು.
ಇದನ್ನೂ ಓದಿ: ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಸಿಬಿಐಗೆ ನೂತನ ಸಾರಥಿ