ರುದ್ರಪ್ರಯಾಗ: ಕೆಲವು ಕಾಂಗ್ರೆಸ್ ನಾಯಕರೇ ಸೇರಿಕೊಂಡು ಸ್ವಪಕ್ಷದ ನಾಯಕಿ ಸೋನಿಯಾ ಗಾಂಧಿಗೆ ಮುರ್ದಾಬಾದ್ ಎಂದು ಘೋಷಣೆಗಳನ್ನು ಕೂಗಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ವಿಡಿಯೋ ನೋಡಿದ ಪಕ್ಷದ ಮುಖಂಡರು, ಇದೊಂದು ನಾಚಿಕೆ ಗೇಡಿನ ಸಂಗತಿ. ಈ ವಿಡಿಯೋದಲ್ಲಿರುವುದು ಸುಳ್ಳು ದೃಶ್ಯಗಳು. ಕಾಂಗ್ರೆಸ್ ಪಕ್ಷಕ್ಕೆ ಅವಮಾನ ಮಾಡಲೆಂದು ಈ ವಿಡಿಯೋವನ್ನು ತಿರುಚಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.
ಉತ್ತರಾಖಂಡದಲ್ಲಿ ಹಣದುಬ್ಬರ ಹಾಗೂ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿಸುತ್ತಿದ್ದು, ಇದರ ನಡುವೆಯೇ ಮುಜುಗರಕ್ಕೀಡಾಗುವಂತಹ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕಂಡುಬರುವ ಹೇಳಿಕೆ ಮತ್ತು ದೃಶ್ಯಗಳಿಂದ ಪಕ್ಷದ ನಾಯರ ಕೈಗಳನ್ನು ಕಟ್ಟಿಹಾಕಿದಂತಿದೆ. ರುದ್ರಪ್ರಯಾಗದ ಕೆಲವು ಕೈ ನಾಯಕರೇ ಸೇರಿಕೊಂಡು ಸ್ವಪಕ್ಷದ ನಾಯಕಿ ವಿರುದ್ಧ ಘೋಷಣೆ ಕೂಗುವ ವಿಡಿಯೋ ಇದಾಗಿದ್ದು ಇದೀಗ ಜಾಲತಾಣದಲ್ಲಿ ಜಾಗ ಪಡೆದುಕೊಂಡಿದೆ.
ಇದೊಂದು ಪಿತೂರಿ- ಬಿಜೆಪಿ ವಿರುದ್ಧ ಕೈ ನಾಯಕರ ಕಿಡಿ: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕುರಿತು ವಿಡಿಯೋದಲ್ಲಿ ಉಲ್ಲೇಖವಾಗಿದೆ. ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಲಕ್ಷ್ಮಣ್ ಸಿಂಗ್ ರಾವತ್ ನೇತೃತ್ವದಲ್ಲಿ ಗುಂಪೊಂದು ಹಣದುಬ್ಬರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿತ್ತು. ಇದೇ ವೇಳೆ, ಕೆಲವು ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಮುರ್ದಾಬಾದ್ ಎಂದು ಘೋಷಣೆ ಕೂಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಬಗ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದು ಇದೊಂದು ಪಿತೂರಿ ಎಂದು ಬಿಜೆಪಿ ವಿರುದ್ಧ ಸಮರ ಸಾರಿದ್ದಾರೆ.
ಸ್ಪಷ್ಟನೆ ನೀಡಿರುವ ರಾವತ್: ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾವತ್, ಧರಣಿ ಪ್ರತಿಭಟನೆಯಲ್ಲಿ ಅಂತಹ ಯಾವುದೇ ಘೋಷಣೆ ಮಾಡಿಲ್ಲ. ಈ ವಿಡಿಯೋ ಎಡಿಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮಾನಹಾನಿ ಮಾಡುವ ಉದ್ದೇಶದಿಂದ ತಥಾಕಥಿತ ಪತ್ರಕರ್ತರೊಬ್ಬರು ವಿಡಿಯೋವನ್ನು ಎಡಿಟ್ ಮಾಡಿ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ ಅನ್ನೋದು ಆತಂಕಕಾರಿ ಸಂಗತಿ. ಈ ಕುರಿತು ರುದ್ರಪ್ರಯಾಗದ ಎಸ್ಪಿ ಅವರಿಗೆ ದೂರು ನೀಡಲಾಗಿದ್ದು, ಈ ವಿಡಿಯೋ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿರುವುದಾಗಿ ಅವರು ಹೇಳಿದ್ದಾರೆ.
ಕಾಂಗ್ರೆಸ್‌ನ ಹಣದುಬ್ಬರ ಮುಕ್ತ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಅಂತಹ ಯಾವುದೇ ಘೋಷಣೆಯನ್ನು ಕೂಗಿಲ್ಲ. ವಿಡಿಯೋವನ್ನು ತಿರುಚಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಬಿಜೆಪಿಗರ ಕೈವಾಡವಲ್ಲದೇ ಮತ್ತೇನು ಅಲ್ಲ. ಅಲ್ಲದೇ ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಬಗ್ಗೆ ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ತಥಾಕಥಿತ ಪತ್ರಕರ್ತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮಾಜಿ ವಕ್ತಾರ ಸೂರಜ್ ಸಿಂಗ್ ನೇಗಿ ಕೂಡ ಒತ್ತಾಯ ಮಾಡಿದ್ದಾರೆ.