ಶಿಮ್ಲಾ (ಹಿಮಾಚಲ ಪ್ರದೇಶ): ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದ ಹಿಮಾಚಲ ಪ್ರದೇಶದ ಮಾಜಿ ಸಚಿವ, ಹಾಲಿ ಶಾಸಕರಾಗಿರುವ ಬಿಜೆಪಿ ಹಿರಿಯ ಮುಖಂಡ ನರಿಂದರ್ ಬ್ರಾಗ್ತಾ (69) ಇಂದು ಕೊನೆಯುಸಿರೆಳೆದಿದ್ದಾರೆ.
ಏಪ್ರಿಲ್ 13ರಂದು ವೈರಸ್ ಅಂಟಿರುವುದು ದೃಢಪಟ್ಟಿದ್ದ ನರಿಂದರ್ ಬ್ರಾಗ್ತಾ 15 ದಿನಗಳಿಂದ ಚಂಡೀಗಢದ ಪಿಜಿಐ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೋವಿಡ್ ವರದಿ ನೆಗೆಟಿವ್ ಬಂದ ಬಳಿಕವೂ ಆರೋಗ್ಯದಲ್ಲಿ ಏರುಪೇರಾದ ಕಾರಣ ಚಿಕಿತ್ಸೆ ಮುಂದುವರೆಸಲಾಗಿತ್ತು. ನಿನ್ನೆಯಷ್ಟೇ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು.
ಇದನ್ನೂ ಓದಿ: ಕೋವಿಡ್ನಿಂದ ಗುಣಮುಖರಾದ ಮೇಲೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ದೆಹಲಿ ಜನತೆ!
ನರಿಂದರ್ ಬ್ರಾಗ್ತಾ ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬಿಜೆಪಿ ಶಾಸಕರೂ ಹಾಗೂ ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ವಿಪ್ ಆಗಿದ್ದರು. ಇವರ ನಿಧನಕ್ಕೆ ಬಿಜೆಪಿ ನಾಯಕರು ಕಂಬನಿ ಮಿಡಿದಿದ್ದಾರೆ.