ಹೈದರಾಬಾದ್: ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನ್ಮದಿನ. ಹಾಗಾಗಿ, ಜಾಲತಾಣಗಳಲ್ಲಿ ಅನೇಕ ರಾಜಕಾರಣಿಗಳು ಮತ್ತು ಬೆಂಬಲಿಗರು ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಆದರೆ, ಭಾರತೀಯ ಜನತಾ ಪಕ್ಷದ ಉನ್ನತ ನಾಯಕರು ಈ ಬಾರಿ ತಮ್ಮದೇ ಪಕ್ಷದ ಸಿಎಂಗೆ ಶುಭಾಶಯ ಕೋರಿಲ್ಲ.
ಶುಭಾಶಯ ಕೋರದ ಗಣ್ಯರು
ಪ್ರತಿ ವರ್ಷ ಬೆಳ್ಳಂಬೆಳಗ್ಗೆಯೇ ಟ್ವಿಟರ್ನಲ್ಲಿ ಯೋಗಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದ ಪ್ರಧಾನಿ ಮೋದಿ ಕೂಡ ಈ ಬಾರಿ ಶುಭ ಕೋರಿಲ್ಲ. ಬಿಜೆಪಿ ಅಧಿಕೃತ ಖಾತೆ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಬಹುತೇಕ ನಾಯಕರು ಟ್ವೀಟ್ ಮೂಲಕ ಹಾರೈಸಿಲ್ಲ .
ಆದರೆ, ದೂರವಾಣಿ ಮೂಲಕ ಗೃಹ ಸಚಿವ ಅಮಿತ್ ಶಾ, ಯೋಗಿ ಆದಿತ್ಯನಾಥ್ಗೆ ಅಭಿನಂದಿಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಬಿಜೆಪಿಯ ಇತರ ಉನ್ನತ ನಾಯಕರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಹೇಮಂತ್ ಬಿಸ್ವಾ ಶರ್ಮಾ ಮುಂತಾದವರು ಯುಪಿ ಸಿಎಂ ಜನ್ಮದಿನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸಂಪೂರ್ಣ ವಿಫಲವಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಗಂಗಾನದಿಯಲ್ಲಿ ತೇಲಿ ಬರುತ್ತಿರುವ ಮೃತದೇಹಗಳೇ ಸಾಕ್ಷಿಯಾಗಿದ್ದು, ವಿಶ್ವದಾದ್ಯಂತ ಭಾರಿ ಸುದ್ದಿಯಾಗಿತ್ತು. ಆದರೆ, ರಾಜ್ಯದಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಆರೋಗ್ಯ ಸೌಲಭ್ಯಗಳ ಕೊರತೆ ಇಲ್ಲ ಎಂದು ಯೋಗಿ ಸ್ಪಷ್ಟಪಡಿಸಿದ್ದಾರೆ.
‘ಕ್ಯಾಬಿನೆಟ್ ಪುನಾರಚನೆ ವದಂತಿ’
ಉತ್ತರಪ್ರದೇಶ ಕ್ಯಾಬಿನೆಟ್ ಮತ್ತು ಬಿಜೆಪಿ ಸಂಘಟನೆ ಪುನರ್ರಚನೆಯ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಈ ಕುರಿತಂತೆ ಬಿಜೆಪಿಯ ಹಿರಿಯ ನಾಯಕರು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಇವೆಲ್ಲವುಗಳಿಂದಾಗಿ ವದಂತಿಗೆ ಮತ್ತಷ್ಟು ಪುಷ್ಠಿ ಸಿಗುತ್ತಿದೆ.
ಅಲ್ಲದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ನಾಯಕತ್ವ ಬದಲಾವಣೆಗೂ ಚಿಂತಿಸಲಾಗಿದೆ ಎನ್ನಲಾಗ್ತಿದೆ.
ಸಿಎಂ ಸ್ಥಾನದ ಮೇಲೆ ಶರ್ಮಾ ಕಣ್ಣು..!
ಮಾಜಿ ಅಧಿಕಾರಿ ಶರ್ಮಾ ಪ್ರಧಾನಿ ಮೋದಿಗೆ ಪರಮಾಪ್ತ, ಒಂದು ವೇಳೆ ಸಂಪುಟ ಪುನರ್ ರಚನೆಯಾದ್ರೆ, ಅವರಿಗೆ ಉನ್ನತ ಖಾತೆ ಸಿಗುವ ಸಾಧ್ಯತೆಯಿದೆ. ಮುಂಬರುವ ಚುನಾವಣೆಯಲ್ಲಿ ಸಿಎಂ ಸ್ಥಾನದ ಮೇಲೂ ಅವರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಮತ್ತೆ ಯೋಗಿ ಆದಿತ್ಯನಾಥ ಬೆನ್ನಿಗೆ ನಿಂತ ಬಿಜೆಪಿ ಹೈಕಮಾಂಡ್... ನಾಯಕತ್ವ ಬದಲಾವಣೆಗೆ ಫುಲ್ ಸ್ಟಾಪ್!
ಇನ್ನೂ 15 ದಿನಗಳವರೆಗೆ ಸಂಪುಟ ವಿಸ್ತರಣೆಯಿಲ್ಲ. ಒಂದು ವೇಳೆ ಕ್ಯಾಬಿನೆಟ್ ವಿಸ್ತರಿಸಿದ್ರೆ, ಎ.ಕೆ.ಶರ್ಮಾರಿಗೆ ಗೃಹ ಖಾತೆ ಅಥವಾ ಆರೋಗ್ಯ ಖಾತೆ ನೀಡಲಾಗುವುದು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಶರ್ಮಾ ಸಂಪುಟ ಸೇರ್ಪಡೆಗೆ ಯೋಗಿ ಆದಿತ್ಯನಾಥ್ ಸಂಪೂರ್ಣ ವಿರೋಧವಿದೆ. ಈಗೇನಾದರೂ ಅವರಿಗೆ ಗೃಹ ಅಥವಾ ಆರೋಗ್ಯ ಖಾತೆ ನೀಡಿದರೆ ಸರ್ಕಾರ ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬ ಸಂದೇಶ ಜನತೆಗೆ ರವಾನೆಯಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.