ಗಾಂಧಿನಗರ, ಗುಜರಾತ್ : ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ವಾರ್ಡ್ 12 ರಲ್ಲಿ ಸ್ವೀಪರ್ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗೆ ಮಾರ್ಚ್ 4, 2023 ರೊಳಗೆ 16.50 ಕೋಟಿ ರೂಪಾಯಿ ಮರುಪಾವತಿ ಮಾಡುವಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೋಟಿಸ್ ನೀಡಿದೆ. ಅಚ್ಚರಿ ಅಂದ್ರೆ, ಶಾಂತಿಲಾಲ್ ಸೋಲಂಕಿ ಅವರು ಪಿಎನ್‌ಬಿಯಲ್ಲಿ ಯಾವುದೇ ಖಾತೆ ಹೊಂದಿಲ್ಲದಿದ್ದರೂ ಸಾಲ ಕಟ್ಟುವಂತೆ ನೋಟಿಸ್ ನೀಡಿರುವುದರಿಂದ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.
ಹೌದು, ಶಾಂತಿಲಾಲ್ ಸೋಲಂಕಿ ಅವರು ಪತ್ನಿ ಜಶಿಬೆನ್ ಅವರೊಂದಿಗೆ ವಡೋದರಾ ನಗರದ ಅಜ್ವಾ ರಸ್ತೆಯಲ್ಲಿರುವ ರಾಜ ಲಕ್ಷ್ಮಿ ಸೊಸೈಟಿಯಲ್ಲಿ ವಾಸಿಸುತ್ತಿದ್ದಾರೆ. ಇವರು ಮೋಭಿ ಶಾಂತಿಲಾಲ್ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ನ ವಾರ್ಡ್ ನಂ.12 ರಲ್ಲಿ ಕಸಗುಡಿಸುವ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಮಾರ್ಚ್ 4, 2023 ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ತೆಗೆದುಕೊಂಡ 16.50 ಕೋಟಿ ರೂಪಾಯಿ ಬಾಕಿಯನ್ನು ವಸೂಲಿ ಮಾಡುವಂತೆ ವಡೋದರಾದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ಸೋಲಂಕಿ ಅವರಿಗೆ ನೋಟಿಸ್ ನೀಡಲಾಗಿದ್ದು, ಇದರಿಂದ ಕುಟುಂಬ ಆತಂಕದಲ್ಲಿದೆ.
ನೋಟಿಸ್ ಬಂದ ನಂತರ ಕುಟುಂಬಸ್ಥರು ತೀವ್ರ ಆತಂಕಗೊಂಡಿದ್ದು, ಮೇ 4, 23 ರೊಳಗೆ ಸಂಪೂರ್ಣ ಹಣ ಪಾವತಿಸುವಂತೆ ಸೂಚಿಸಲಾಗಿದೆ. ಮೊತ್ತ ನೀಡದಿದ್ದರೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ನೋಟಿಸ್ ಕುರಿತು ಮಾತನಾಡಲು ಕುಟುಂಬಸ್ಥರು ಕಚೇರಿಗೆ ತೆರಳಿದಾಗ ಯಾವುದೇ ಸಮಾಧಾನಕರ ಉತ್ತರ ಸಿಗದೇ ಕೊನೆಗೆ ಶಾಸಕರೊಬ್ಬರ ನೆರವು ಪಡೆದಿದ್ದಾರೆ.
"16.50 ಕೋಟಿ ಸಾಲವನ್ನು ಪಾವತಿಸದ ಹಿನ್ನೆಲೆಯಲ್ಲಿ ಶಾಂತಿಲಾಲ್ ಸೋಲಂಕಿ ಅವರಿಗೆ ಮನೆ ಸೀಲ್ ಮಾಡುವಂತೆ ನೋಟಿಸ್ ನೀಡಲಾಗಿದೆ. ಅವರ ಅಹವಾಲು ಆಲಿಸಿದ ಬಳಿಕ ಜಿಲ್ಲಾಧಿಕಾರಿಗಳಿಗೆ ಲಿಖಿತ ತಹರೀರ್ (ಮೆಮೊ) ಕೂಡ ನೀಡಲಾಗಿದೆ. ಶಾಂತಿಲಾಲ್ ಆಸ್ತಿಯ ಮೌಲ್ಯವೂ 5 ರಿಂದ 10 ಲಕ್ಷ ರೂ.ಗಳಿರುವಾಗ ಹೇಗೆ 16.50 ಕೋಟಿ ರೂ. ಕಟ್ಟುವಂತೆ ನೋಟಿಸ್ ನೀಡಲಾಯಿತು. ಅವರಿಗೆ 16 ಕೋಟಿಯ ಬೆಲೆ ಎಷ್ಟು ಎಂಬುದೇ ಗೊತ್ತಿಲ್ಲ. ಈ ಸುದ್ದಿ ಕೇಳಿದ ಪತ್ನಿ ಮತ್ತು ಸೊಸೆ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಬ್ಯಾಂಕ್ ನೀಡಿದ ನಕಲಿ ನೋಟಿಸ್. ಶಾಂತಿಲಾಲ್ ಅವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸುತ್ತೇನೆ. ಈ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿದೆ" ಎಂದು ಶಾಸಕ ನೀರಜ್ ಜೈನ್ ತಿಳಿಸಿದ್ದಾರೆ.
ಇದನ್ನೂ ಓದಿ : ನಿಮೋ ವಂಚಿತ ಪಿಎನ್ಬಿಗೆ ₹ 4,750 ಕೋಟಿ ನಷ್ಟ, ಚೇತರಿಕೆ ಗತಿಯಲ್ಲಿ ಬ್ಯಾಂಕ್
ಇನ್ನು ನೋಟಿಸ್ ಬಂದಿರುವ ಕುರಿತು ಮಾತನಾಡಿದ ಶಾಂತಿಲಾಲ್ ಸೋಲಂಕಿ ಅವರು, "ನಗರದ ಪಾಲಿಕೆ ಶಾಖೆಯಲ್ಲಿ ವಾರ್ಡ್ ನಂಬರ್ 12ರಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಬ್ಯಾಂಕ್ ಖಾತೆ ಬ್ಯಾಂಕ್ ಆಫ್ ಇಂಡಿಯಾದಲ್ಲಿದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಾನು ಖಾತೆ ಹೊಂದಿಲ್ಲ. ಸಾಲ ಮಾಡದಿದ್ದರೂ 16.50 ಕೋಟಿ ರೂಪಾಯಿ ಜಪ್ತಿ ನೋಟಿಸ್ ನೀಡಲಾಗಿದೆ. ಮಮಲದಾರ್ ಕಚೇರಿ ಮತ್ತು ಪೂರ್ವ ವಡೋದರಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಈ ನೋಟಿಸ್ ಜಾರಿ ಮಾಡಿದ್ದಾರೆ. ಮೇ 4 ರೊಳಗೆ ಮರುಪಾವತಿ ಮಾಡಬೇಕು, ಇಲ್ಲದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ" ಎಂದು ಆತಂಕ ವ್ಯಕ್ತಪಡಿಸಿದರು.