ಶ್ರೀಕಾಕುಳಂ: ಸ್ನೇಹಿತನ ಜನ್ಮದಿನದ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಯುವಕರೆಲ್ಲರೂ ಖುಷಿ ಅನುಭವಿಸುತ್ತಿದ್ದರು. ಎಲ್ಲರೂ ಒಟ್ಟಾಗಿ ಆಹಾರ ಸೇವಿಸಿ ಸಮುದ್ರದ ತೀರದಲ್ಲಿ ಮೋಜು-ಮಸ್ತಿ ಮಾಡಿದ್ದಾರೆ. ಈ ವೇಳೆ ಸೆಲ್ಫಿ ತೆಗೆಯಲು ಹೋಗಿ ಆಕಸ್ಮಿಕವಾಗಿ ನಾಲ್ವರು ಸಮುದ್ರಪಾಲಾಗಿದ್ದಾರೆ. ಈ ದುರ್ಘಟನೆ ಪುಕ್ಕಳ್ಲಪಾಲೆಂ ಸಮುದ್ರ ತೀರದಲ್ಲಿ ನಡೆದಿದೆ.
ಘಟನೆಯ ವಿವರ
ಬೊರ್ರಪುಟ್ಟಗ ನಿವಾಸಿ ಸಾಯಿ ಲೋಕೇಶ್ ತನ್ನ ಹುಟ್ಟುಹಬ್ಬ ಆಚರಿಸಲು 18 ಮಂದಿ ಸ್ನೇಹಿತರೊಡನೆ ಪುಕ್ಕಳ್ಲಪಾಲೆಂ ಸಮುದ್ರ ತೀರಕ್ಕೆ ತೆರಳಿದ್ದಾನೆ. ಇವರ ಪೈಕಿ ಐವರು ಸೆಲ್ಫಿ ತೆಗೆದುಕೊಳ್ಳಲು ಸಮುದ್ರದ ಒಳಭಾಗಕ್ಕೆ ಹೋಗಿದ್ದಾರೆ. ಈ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ಐವರು ನೀರಿನೊಳಗೆ ಸಿಲುಕಿಕೊಂಡಿದ್ದರು.
ದುರ್ಘಟನೆಯ ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಇಷ್ಟರಲ್ಲಿ ಸಾಯಿ ಲೋಕೇಶ್ (20), ಸೇರಿ ತಿರುಮಲ (17), ಮನೋಜ್ (21) ಮತ್ತು ಗೋಪಿಚಂದ ಸಮುದ್ರಪಾಲಾಗಿದ್ದರು. ಶ್ರೀರಾಮ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸದ್ಯಕ್ಕೆ ಮೂವರ ಮೃತದೇಹಗಳು ಪತ್ತೆಯಾಗಿದ್ದು ಮತ್ತೊಬ್ಬ ಯುವಕ ಗೋಪಿಚಂದ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಒಂದೇ ಗ್ರಾಮದ ಮೂವರು ಯುವಕರು ಸಾವನ್ನಪ್ಪಿದ್ದು ಬೊರ್ರಪುಟ್ಟಗನೂರಿನಲ್ಲಿ ನೀರವ ಮೌನ ಆವರಿಸಿದೆ.