ನವದೆಹಲಿ/ಗ್ರೇಟರ್ ನೋಯ್ಡಾ: ತನ್ನ ರಾಜಸ್ಥಾನ ಗೆಳೆಯನಿಗಾಗಿ ಪಾಕಿಸ್ತಾನದ ಕರಾಚಿಯಿಂದ ಬಂದಿರುವ ಸೀಮಾ ಹೈದರ್ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿರುವ ನಡುವೆಯೇ ಆಕೆ, ಭಾರತದ ಬಗ್ಗೆ ಹಲವು ರೀತಿಯಲ್ಲಿ ನಿಷ್ಠೆ ತೋರಿಸುತ್ತಿದ್ದಾರೆ. ಆಗಸ್ಟ್ 15 ರಂದು ತ್ರಿವರ್ಣ ಧ್ವಜ ಹಾರಿಸಿ ಹಿಂದೂಸ್ತಾನ ಜಿಂದಾಬಾದ್, ಪಾಕಿಸ್ತಾನ್ ಮುರ್ದಾಬಾದ್ ಘೋಷಣೆ ಕೂಗಿದ್ದರು. ಇದೀಗ ಚಂದ್ರನ ಮೇಲೆ ಲ್ಯಾಂಡರ್ ಇಳಿದು ಐತಿಹಾಸಿಕ ಸಾಧನೆ ಸೃಷ್ಟಿಯಾದ ಆಗಸ್ಟ್ 23 ರಂದು ಉಪವಾಸ ಮಾಡಿದ್ದಾಗಿ ಘೋಷಿಸಿದ್ದಾರೆ. ಅಲ್ಲದೇ, ಪ್ರತಿವರ್ಷವೂ 23 ರಂದು ನಿರಾಹಾರ ನಡೆಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿರುವ ಸೀಮಾ ಹೈದರ್, ಆಗಸ್ಟ್ 23 ರಂದು ಚಂದ್ರಯಾನ- 3 ಯೋಜನೆಯು ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಉಪವಾಸ ಮಾಡಿದ್ದೇನೆ. ದೇವರ ಆಶೀರ್ವಾದದಿಂದ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ. ಇದು ನನ್ನಲ್ಲಿ ಸಂತಸ ತಂದಿದೆ. ಜೊತೆಗೆ ಪ್ರಧಾನಿ ಮೋದಿ ಅವರು ಲ್ಯಾಂಡರ್ ಇಳಿದ ಜಾಗಕ್ಕೆ ಶಿವಶಕ್ತಿ ಮತ್ತು ತಿರಂಗಾ ಎಂದು ನಾಮಕರಣ ಮಾಡಿದ್ದು, ವಿಜ್ಞಾನದಲ್ಲಿ ನಾರಿಶಕ್ತಿ ಬೆಳೆಯಬೇಕು ಎಂದು ಕರೆ ನೀಡಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ.
ಪ್ರತಿವರ್ಷ ಉಪವಾಸ : ನನ್ನ ಪರ ವಕೀಲರು ಕರೆ ಮಾಡಿ ಪ್ರಧಾನಿ ಮೋದಿ ಅವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಹೊರಟಿದ್ದಾರೆ ಎಂದು ತಿಳಿಸಿದರು. ಅದರಂತೆ ನಾನು ಮಾಧ್ಯಮದಲ್ಲಿ ಅವರ ಭಾಷಣವನ್ನು ಆಲಿಸಿದೆ. ಅವರಾಡಿದ ಪ್ರೇರಣಾದಾಯಕ ಮಾತುಗಳು ಇಷ್ಟವಾದವು. ಚಂದ್ರಯಾನದ ಯಶಸ್ಸಿಗಾಗಿ ಪ್ರತಿವರ್ಷ ದೇವರಲ್ಲಿ ಪ್ರಾರ್ಥಿಸಿ ಉಪವಾಸ ಮಾಡುವುದಾಗಿ ಜೈಶ್ರೀರಾಮ್, ಜೈ ಹಿಂದೂಸ್ತಾನ್ ಎಂದು ಸೀಮಾ ಘೋಷಣೆ ಕೂಗಿರುವುದು ವಿಡಿಯೋದಲ್ಲಿದೆ.
ಇದಕ್ಕೂ ಮೊದಲು ಚಂದ್ರಯಾನ-3 ಯೋಜನೆಯ ಲ್ಯಾಂಡರ್ ಚಂದ್ರನ ಮೇಲೆ ಇಳಿದ ನಂತರ ಸೀಮಾ ಹೈದರ್ ರಬೂಪುರದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದ್ದರು. ಮತ್ತೊಂದೆಡೆ ಸೀಮಾ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇವರ ಪ್ರೇಮ ಪ್ರಕರಣ ಕುರಿತು ಚಿತ್ರ ನಿರ್ಮಾಣಕ್ಕೆ ಯೋಜಿಸಿದ್ದ ‘ಕರಾಚಿ ಟು ನೊಯ್ಡಾ’ ಎಂಬ ಹೆಸರನ್ನು ಚಿತ್ರ ಸಂಘದಿಂದ ತಿರಸ್ಕೃತವಾಗಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ, ಸೀಮಾ ಹೈದರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪಾಕಿಸ್ತಾನ ಟೀಕಿಸಿದ್ದ ಸೀಮಾ: ಈ ಹಿಂದೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ವೇಳೆ ಸೀಮಾ ಹೈದರ್ 'ಹರ್ಘರ್ ತಿರಂಗಾ' ಅಭಿಯಾನದಲ್ಲಿ ಪಾಲ್ಗೊಂಡು, ಭಾರತ ಜಿಂದಾಬಾದ್, ಪಾಕಿಸ್ತಾನ ಮುರ್ದಾಬಾದ್ ಎಂದು ಘೋಷಣೆ ಕೂಗಿದ್ದರು. ಕುಟುಂಬ ಸಮೇತರಾಗಿ ಅವರ ಮನೆಯ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೀಮಾ ಹೈದರ್ ಮತ್ತು ಪ್ರಿಯಕರ ಸಚಿನ್ ಮೀನಾ ಮತ್ತು ಇಬ್ಬರ ಪರವಾಗಿ ಕೋರ್ಟ್ನಲ್ಲಿ ವಾದ ಮಂಡಿಸುತ್ತಿರುವ ವಕೀಲ ಎಪಿ ಸಿಂಗ್ ಅವರು ಸೇರಿ ಕುಟುಂಬಸ್ಥರು ಮನೆಯ ಮೇಲೆ ಹರ್ಘರ್ ತಿರಂಗಾ ಅಭಿಯಾನದ ಭಾಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ, ಮೋಹನ್ ಭಾಗವತ್ಗೆ ರಾಖಿ ಕಳುಹಿಸಿದ ಪಾಕ್ ಪ್ರಜೆ ಸೀಮಾ ಹೈದರ್