ಚುರು(ರಾಜಸ್ಥಾನ): ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲೇ ವರನೋರ್ವ ಮದ್ಯಪಾನ ಸೇವನೆ ಮಾಡ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಪ್ರಕರಣ ವಧುವಿನ ತಂದೆಯ ಗಮನಕ್ಕೆ ಬರುತ್ತಿದ್ದಂತೆ ತಮ್ಮ ಮಗಳನ್ನ ಬೇರೆ ವ್ಯಕ್ತಿ ಜೊತೆ ಅದೇ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಸಿದ್ದಾರೆ. ರಾಜಸ್ಥಾನದ ಚುರುವಿನಲ್ಲಿ ಈ ಘಟನೆ ನಡೆದಿದ್ದು, ಇದೀಗ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.
ಏನಿದು ಪ್ರಕರಣ?: ರಾಜಸ್ಥಾನದ ಚುರುವಿನಲ್ಲಿ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ವೇಳೆ, ವರ ಮದುವೆ ಮಾಡಿಕೊಳ್ಳುವ ಸಂದರ್ಭದಲ್ಲೇ ಮದ್ಯಪಾನ ಮಾಡಿದ್ದಾನೆ. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ವಧುವಿನ ಪೋಷಕರ ಗಮನಕ್ಕೆ ಬರುತ್ತಿದ್ದಂತೆ ರಾತ್ರೋರಾತ್ರಿ ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.
ವಧುವಿನ ಮನೆಗೆ ಮೆರವಣಿಗೆ ಮೂಲಕ ಹೊರಡಲು ವರ ಶುರುವಾಗುತ್ತಿದ್ದಂತೆ ಆತನ ಸ್ನೇಹಿತರು ಮದ್ಯಪಾನ ಮಾಡಿದ್ದಾರೆ. ಮಧ್ಯರಾತ್ರಿ 2 ಗಂಟೆಯಾದ್ರೂ ಮೆರವಣಿಗೆ ವಧುವಿನ ಮನೆಗೆ ತಲುಪಿಲ್ಲ. ಜೊತೆಗೆ ವರನ ಸ್ನೇಹಿತರು ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ್ದಾರೆ. ಗಲಾಟೆ ನಿಲ್ಲಿಸುವಂತೆ ವಧುವಿನ ಕಡೆಯವರು ಮನವಿ ಮಾಡಿಕೊಂಡಾಗ ಹುಡುಗನ ಸೋದರ ಮಾವ ಜಗಳಕ್ಕೆ ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡು ತಮ್ಮ ಮಗಳಿಗೆ ಬೇರೆ ಹುಡುಗನೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ. ರಾತ್ರಿ ವೇಳೆ ಅದೇ ಮಂಟಪದಲ್ಲಿ ಬೇರೊಬ್ಬ ಹುಡುಗನೊಂದಿಗೆ ಮದುವೆ ಕಾರ್ಯಕ್ರಮ ಸಹ ಮುಗಿಸಿದ್ದಾರೆ.
ಇದನ್ನೂ ಓದಿ: ಜಮೀನು, ಮನೆ ಮಕ್ಕಳ ಹೆಸರಿಗೆ ಬರೆದ್ರೂ, ಮುಪ್ಪಿನ ಕಾಲದಲ್ಲಿ ಹೆತ್ತವರನ್ನ ಕೈಬಿಟ್ಟ ಪುತ್ರರು
ಬೆಳಗ್ಗೆ ಮದುಮಗ ಸುನೀಲ್ ಹಾಗೂ ಆತನ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾತನಾಡಿರುವ ವಧುವಿನ ಪೋಷಕರು, ಮದುವೆ ಕಾರ್ಯಕ್ರಮದಲ್ಲೇ ಇಷ್ಟೊಂದು ಬೇಜವಾಬ್ದಾರಿಯಾಗಿ ನಡೆದುಕೊಳ್ಳುವ ಇವರು, ಮುಂದೆ ಹೇಗೆ ಸಂಬಂಧ ಇಟ್ಟುಕೊಳ್ಳಬಹುದು? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಎರಡೂ ಕಡೆಯವರ ಮನವೊಲಿಕೆ ಮಾಡಿದ್ದಾರೆ. ಜೊತೆಗೆ ಮಧ್ಯರಾತ್ರಿ ಬೇರೆ ಯುವಕನೊಂದಿಗೆ ನಡೆದ ಮದುವೆ ರದ್ದುಗೊಳಿಸುವಂತೆ ತಿಳಿಸಿದ್ದಾರೆ.