ಚಂಡೀಗಢ : ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜನವರಿ 5ರಂದು ಪಂಜಾಬ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಓರ್ವ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮತ್ತು ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಏಳು ಅಧಿಕಾರಿಗಳನ್ನು ಪಂಜಾಬ್ ಪೊಲೀಸ್ ಇಲಾಖೆ ಅಮಾನತುಗೊಳಿಸಿದೆ.
ಫೆಬ್ರವರಿ 5, 2022 ರಂದು ಪ್ರಧಾನಿ ಫಿರೋಜ್ಪುರದಲ್ಲಿ ನಡೆಯಬೇಕಿದ್ದ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ರೈತರು ಪ್ರಧಾನಿ ಸಾಗುತ್ತಿದ್ದ ರಸ್ತೆ ಬಂದ್ ಮಾಡಿದ್ದರು. ಇದರಿಂದ ಪ್ರಧಾನಿಯವರ ಬೆಂಗಾವಲು ವಾಹನವನ್ನು ಸುಮಾರು 20 ನಿಮಿಷಗಳ ಕಾಲ ರಸ್ತೆ ಮಧ್ಯದಲ್ಲಿಯೇ ನಿಲ್ಲಿಸುವಂತಾಗಿತ್ತು.
ಈ ಪ್ರಕರಣದಲ್ಲಿ ಆಗಿನ ಫಿರೋಜಪುರ್ ಎಸ್ಪಿ ಗುರ್ವಿಂದರ್ ಸಿಂಗ್ ಸಂಗಾ, ಡಿಎಸ್ಪಿ ಪಾರ್ಸನ್ ಸಿಂಗ್, ಡಿಎಸ್ಪಿ ಜಗದೀಶ್ ಕುಮಾರ್, ಇನ್ಸ್ಪೆಕ್ಟರ್ ತೇಜಿಂದರ್ ಸಿಂಗ್, ಬಲ್ವಿಂದರ್ ಸಿಂಗ್, ಜಸ್ವಂತ್ ಸಿಂಗ್ ಮತ್ತು ಎಎಸ್ಐ ರಾಕೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಅಮಾನತು ಆದೇಶ ನವೆಂಬರ್ 22ರಿಂದ ಜಾರಿಗೆ ಬಂದಿದೆ ಎಂದು ರಾಜ್ಯ ಡಿಜಿಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಜನವರಿ 5, 2022 ರಂದು ಫಿರೋಜ್ಪುರದಲ್ಲಿ ಪ್ರಧಾನಿ ಮೋದಿಯವರ ಬೆಂಗಾವಲು ಪಡೆಯ ಭದ್ರತೆ ಉಲ್ಲಂಘನೆಯಾದಾಗ ಆಗ ಕರ್ತವ್ಯದಲ್ಲಿದ್ದ ಎಸ್ಪಿ ಗುರ್ವಿಂದರ್ ಸಿಂಗ್ ಸಂಗಾ ಅವರನ್ನು ಅಮಾನತುಗೊಳಿಸಲಾಗಿತ್ತು. ಘಟನೆಯ ಸಮಯದಲ್ಲಿ, ಗುರ್ವಿಂದರ್ ಸಂಗಾ ಫಿರೋಜ್ಪುರದ ಎಸ್ಪಿಯಾಗಿ ಉಸ್ತುವಾರಿ ವಹಿಸಿದ್ದರು. ಘಟನೆಯ ನಂತರ ಘಟನೆಯ ಬಗ್ಗೆ ತೀವ್ರ ತನಿಖೆ ನಡೆದು ಈಗ ತಪ್ಪಿತಸ್ಥ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಜನವರಿ 5 ರಂದು ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ಸಮಯದಲ್ಲಿ ಸಾಕಷ್ಟು ಸಂಖ್ಯೆಯ ಭದ್ರತಾ ಸಿಬ್ಬಂದಿ ಲಭ್ಯವಿದ್ದರೂ, ಫಿರೋಜ್ಪುರ ಎಸ್ಎಸ್ಪಿ ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ತಾನು ನೇಮಿಸಿದ ಐದು ಸದಸ್ಯರ ಸಮಿತಿ ಹೇಳಿದೆ ಎಂದು ಸುಪ್ರೀಂ ಕೋರ್ಟ್ ಆಗಸ್ಟ್ನಲ್ಲಿ ತಿಳಿಸಿತ್ತು.
"ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಫಿರೋಜ್ಪುರ ಎಸ್ಎಸ್ಪಿ ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ. ಸಾಕಷ್ಟು ಸಂಖ್ಯೆಯ ಪೊಲೀಸರು ಲಭ್ಯವಿದ್ದರೂ ಮತ್ತು ಪ್ರಧಾನಿ ಆ ಮಾರ್ಗದಿಂದ ಸಾಗಲಿದ್ದಾರೆ ಎಂಬ ಬಗ್ಗೆ ಎರಡು ಗಂಟೆಗಳ ಮುಂಚಿತವಾಗಿಯೇ ತಿಳಿಸಲಾಗಿದ್ದರೂ ಅವರು ಭದ್ರತೆ ಒದಗಿಸಲು ವಿಫಲರಾಗಿದ್ದಾರೆ" ಎಂದು ಅದು ಹೇಳಿದೆ.
ಇದನ್ನೂ ಓದಿ : ಸಿಲ್ಕ್ಯಾರಾ ಸುರಂಗ ಅವಘಡ: ತುಂಡಾದ ಯಂತ್ರ ತೆರವಿಗೆ ಪ್ಲಾಸ್ಮಾ ಕಟ್ಟರ್ ಆಗಮನ