ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಚೊಚ್ಚಲ ಜಿ20 ಸಭೆಗೆ ಅಂತಿಮ ಸಿದ್ಧತೆಗಳು ಆರಂಭವಾಗಿದೆ. ಜಿ20 ಸಭೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಭೆಯ ಮುಖ್ಯ ಸ್ಥಳದಲ್ಲಿ ಕಮಾಂಡೋಗಳ ನಿಯೋಜಿಸಲಾಗಿದ್ದು, ಬಂದೋಬಸ್ತ್ ಹೆಚ್ಚಿಸಲಾಗಿದೆ. ಶ್ರೀನಗರದ ಸಿಟಿ ಸೆಂಟರ್ ಲಾಲ್ ಚೌಕ್ ಮತ್ತು ದಾಲ್ ಸರೋವರದ ದಡದಲ್ಲಿರುವ ಶೇರಿ ಕಾಶ್ಮೀರ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ (ಎಸ್‌ಕೆಐಸಿಸಿ) ಸುತ್ತಲೂ ಕಮಾಂಡೋಗಳ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
ಪ್ರಸ್ತುತ ವರ್ಷ ಜಿ20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿರುವ ಭಾರತವು ದೇಶದ 50 ಪ್ರಮುಖ ನಗರಗಳಲ್ಲಿ ಸರಣಿ ಸಭೆಗಳನ್ನು ಹಮ್ಮಿಕೊಂಡಿದೆ. ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮೇ 22 ರಿಂದ 24ರವರೆಗೆ ಮಹತ್ವದ ಸಭೆ ನಡೆಯಲಿದೆ. ಈ ವರ್ಷ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೂ ಮುನ್ನ ಶ್ರೀನಗರ ಸೇರಿದಂತೆ ಹಲವಡೆ ಸಭೆಗಳು ನಡೆಯಲಿವೆ.
ಶ್ರೀನಗರದಲ್ಲಿ ಜಿ20 ಸಭೆ ಹಿನ್ನೆಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಮ್ಮು - ಕಾಶ್ಮೀರ ಪೊಲೀಸರು, ಭಾರತೀಯ ಸೇನೆಯ ಯೋಧರೊಂದಿಗೆ ಕಮಾಂಡೋಗಳನ್ನೂ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಹೆಚ್ಚುವರಿ ಕ್ರಮವಾಗಿ ಶ್ರೀನಗರದ ಅನೇಕ ಶಾಲೆಗಳಿಗೆ ಮಂಗಳವಾರದಿಂದ ರಜೆ ಘೋಷಿಸಲಾಗಿದೆ. ಇತರಡೆಗಳಲ್ಲಿ ಬುಧವಾರದಿಂದ ಜಿ-20 ಸಭೆ ಮುಕ್ತಾಯದವರೆಗೆ ಶಾಲೆಗಳು ಮುಚ್ಚುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕರ ಭೀತಿ: ಕಣಿವೆ ನಾಡಿನಲ್ಲಿ ಜಿ20 ಸಭೆಗೆ ಭಯೋತ್ಪಾದಕರ ಭೀತಿ ಎದುರಾಗಿದೆ. ಗಮನಾರ್ಹ ಎಂದರೆ ಶ್ರೀನಗರದಲ್ಲಿ ಈ ಸಭೆ ನಿಗದಿಯಾದ ಬೆನ್ನಲ್ಲೆ ನಿರಂತರವಾಗಿ ದಾಳಿ ನಡೆಯುತ್ತಿವೆ. ಜಿ20 ಸಭೆ ವಿಫಲಗೊಳಿಸುವ ಪ್ರಯತ್ನದಲ್ಲಿ ಉಗ್ರರು ತಮ್ಮ ದಾಳಿಗಳನ್ನು ಹೆಚ್ಚಿಸಿದ್ದಾರೆ ಎನ್ನಲಾಗಿದೆ. ಈ ವರ್ಷದಲ್ಲಿ ಜಮ್ಮು ಪ್ರದೇಶದಲ್ಲಿ ನಡೆದ ಭಯೋತ್ಪಾದಕ ನಾಲ್ಕು ದಾಳಿಗಳಲ್ಲಿ ಹತ್ತು ಜನ ಭದ್ರತಾ ಸಿಬ್ಬಂದಿ ಮತ್ತು ಏಳು ನಾಗರಿಕರ ಹತ್ಯೆಗೀಡಾಗಿದ್ದಾರೆ.
ಅಲ್ಲದೇ, ಶ್ರೀನಗರದಲ್ಲಿ ಜಿ20 ಸಭೆಗೆ ಮುನ್ನ ಉಗ್ರರು ಸಾಮೂಹಿಕ ದಾಳಿ ನಡೆಸಲು ಪ್ರಯತ್ನಿಸಬಹುದು ಎಂದು ಭೀತಿ ಸಹ ಇದೆ. ಈ ವರದಿ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಉಗ್ರಗಾಮಿಗಳು ಜಮ್ಮುವಿನ ಸೇನಾ ಶಾಲೆಯನ್ನು ಗುರಿಯಾಗಿಸಿಕೊಂಡು ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಳ್ಳಬಹುದು ಎಂಬ ಮಾಹಿತಿ ಸೇನೆ ಮತ್ತು ಪೋಲೀಸರ ಅಧಿಕಾರಿಗಳಿಗೆ ಲಭ್ಯವಾಗಿದೆ. ಈ ಕಾರಣಕ್ಕಾಗಿ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಲಾಗಿದ್ದು, ಜಿ20 ಸಭೆಯ ಸಮಯದಲ್ಲಿ ಆನ್‌ಲೈನ್ ಮೂಲಕವೇ ತರಗತಿಗಳು ನಡೆಯಲಿವೆ.
ಶ್ರೀನಗರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಲಿಟರಿ, ಪೊಲೀಸ್, ಸಿವಿಲ್ ಸೆಕ್ರೆಟರಿಯೇಟ್ ಮುಂತಾದ ಮಹತ್ವದ ಸಂಸ್ಥೆಗಳ ಸುತ್ತಲೂ ಬಹು ಹಂತದ ಭದ್ರತೆಯನ್ನು ಸ್ಥಾಪಿಸಲಾಗಿದೆ. ನಗರದಲ್ಲಿ ಭದ್ರತಾ ಪಡೆಗಳ ಸಿಬ್ಬಂದಿ ವಿವಿಧ ಪ್ರಮುಖ ಸ್ಥಳಗಳಲ್ಲಿ ಬೀಡುಬಿಟ್ಟಿದ್ದು, ಕಮಾಂಡೋಗಳನ್ನೂ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಇದನ್ನೂ ಓದಿ: ಅರುಣಾಚಲದ ಬಳಿಕ ಶ್ರೀನಗರದಲ್ಲೂ ಜಿ20 ಸಭೆಗೆ ನಿರ್ಧಾರ: ಚೀನಾ, ಪಾಕ್‌ಗೆ ಸೆಡ್ಡು ಹೊಡೆದ ಭಾರತ