ನವದೆಹಲಿ: ಅಯೋಧ್ಯೆಯಲ್ಲಿರುವ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಮುನ್ನ ಭಾರತೀಯ ರೈಲ್ವೇ ಅಯೋಧ್ಯೆ ರೈಲು ನಿಲ್ದಾಣದಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಿದೆ. ಸಮಾರಂಭದ ವೇಳೆ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ನಿಗಾ ಇಡಲು ಮತ್ತು ರಾತ್ರಿಯಿಡೀ ಮೇಲ್ವಿಚಾರಣೆ ಮಾಡಲು ಹಲವಾರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.
ಸರ್ಕಾರಿ ರೈಲ್ವೆ ಪೊಲೀಸ್ ಮತ್ತು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯನ್ನು ನಿಲ್ದಾಣ ಮತ್ತು ಸುತ್ತಮುತ್ತ ನಿಯೋಜಿಸಲಾಗಿದೆ ಮತ್ತು ಕಣ್ಗಾವಲಿಗಾಗಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ಭಾಗಗಳಿಂದ ಸಾವಿರಾರು ಅತಿಥಿಗಳು ಆಗಮಿಸುವ ನಿರೀಕ್ಷೆಯಿದೆ. ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ ರೈಲ್ವೆ ಮತ್ತು ಉತ್ತರಪ್ರದೇಶದ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದಾರೆ.
ಇತ್ತೀಚೆಗೆ, ಅಯೋಧ್ಯಾ ಕಂಟೋನ್ಮೆಂಟ್‌ನಲ್ಲಿ ಜನವರಿ 20 ರಿಂದ 31 ರವರೆಗೆ ಎಲ್ಲ ರೀತಿಯ ಪಾರ್ಸೆಲ್ ನಿರ್ವಹಣೆ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಲಾಗಿದೆ. ಇದಕ್ಕಾಗಿ ಭದ್ರತಾ ವ್ಯವಸ್ಥೆಗಳನ್ನ ಬಿಗಿಗೊಳಿಸಲಾಗಿದೆ. ಕ್ರೌಡ್ ಮ್ಯಾನೇಜ್ಮೆಂಟ್ಗೂ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ತಿಳಿಸಿದೆ.
"ವಿಶೇಷ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ಪಾರ್ಸೆಲ್ ಗೋಡೌನ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳು, ಪಾರ್ಸೆಲ್ ಪ್ಯಾಕೇಜ್‌ಗಳು ಮತ್ತು ಪ್ಯಾಕಿಂಗ್‌ಗಳಿಂದ ಮುಕ್ತವಾಗಿರುತ್ತವೆ, ನಿಲ್ದಾಣಗಳಲ್ಲಿ ಗುತ್ತಿಗೆ ಪಡೆದ ಎಸ್‌ಎಲ್‌ಆರ್‌ಗಳು ಮತ್ತು ವಿಪಿಗಳು (ಬೇಡಿಕೆ ವಿಪಿಗಳು ಸೇರಿದಂತೆ) ಒಳ ಮತ್ತು ಹೊರಗಿನ ಪಾರ್ಸೆಲ್ ಟ್ರಾಫಿಕ್ ಮೇಲೆ ನಿರ್ಬಂಧ ಹೇರಲಾಗಿದೆ. ಹೊರಭಾಗದ ಪಾರ್ಸೆಲ್ ಬುಕಿಂಗ್ ಅನ್ನು ಜನವರಿಯಿಂದಲೇ ತಡೆ ಹಿಡಿಯಲಾಗಿದೆ ಎಂದು ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಕ್ ಕುಮಾರ್ ಹೇಳಿದ್ದಾರೆ.
ನಿರ್ಬಂಧಗಳ ಬಗ್ಗೆ ಮಾಹಿತಿ ನೀಡಿದ ರೈಲ್ವೆ, ಅಯೋಧ್ಯೆ ಕ್ಯಾಂಟ್ ಮತ್ತು ಪ್ರಯಾಗ್‌ರಾಜ್ ಸಂಗಮ್ (ಪಿವೈಜಿಎಸ್) ನಿಲ್ದಾಣಗಳಲ್ಲಿ ಲೋಡ್ ಮತ್ತು ಅನ್‌ಲೋಡಿಂಗ್ ಸೌಲಭ್ಯಗಳಿಗೆ ನಿಲುಗಡೆ ಹೊಂದಿರುವ ಎಲ್ಲ ರೀತಿಯ ಪಾರ್ಸೆಲ್ ನಿರ್ವಹಣೆ ಮತ್ತು ಇತರ ವಿಭಾಗಗಳು ಮತ್ತು ವಲಯಗಳಿಂದ ಬರುವ ರೈಲುಗಳಿಗೂ ಸಹ ನಿರ್ಬಂಧ ಅನ್ವಯಿಸುತ್ತದೆ ಎಂದು ಹೇಳಿದೆ.
ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರು, ಮರು ನಿರ್ಮಾಣಗೊಂಡಿರುವ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದರು ಮತ್ತು ಹಲವಾರು ಇತರ ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ಉದ್ಘಾಟನೆ ಬಳಿಕ ಈ ರೈಲ್ವೆ ನಿಲ್ದಾಣದಿಂದ ಸುಮಾರು 10 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಪುನರ್ ನವೀಕರಣ ಪೂರ್ಣಗೊಂಡ ಬಳಿಕ ಈ ನಿಲ್ದಾಣ ಸುಮಾರು 60 ಸಾವಿರ ಜನರ ದಟ್ಟಣೆಯನ್ನು ನಿಭಾಯಿಸಲಿದೆ ಎಂದು ಉದ್ಘಾಟನೆ ದಿನದಂದು ಪ್ರಧಾನಿಗಳು ಮಾಹಿತಿ ನೀಡಿದ್ದರು.
ಇದನ್ನು ಓದಿ:ಪ್ರಾಣ ಪ್ರತಿಷ್ಠಾಪನೆ: ಜನವರಿ 22 ರಂದು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ