ನವದೆಹಲಿ: ರಾಜ್ಯಸಭೆಯ ಮಾಜಿ ಸದಸ್ಯ, ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ಭದ್ರತೆ ಮತ್ತು ಸುರಕ್ಷತೆಗಾಗಿ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸಂಜಯ್ ಜೈನ್ ಅವರು ಆ ನಿಟ್ಟಿನಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮುಂದೆ ಹೇಳಿಕೆ ಸಲ್ಲಿಸಿದರು.
ಇದೇ ವೇಳೆ, ಶನಿವಾರದ (ನ.5) ಹೊತ್ತಿಗೆ ಸರ್ಕಾರಿ ವಸತಿ ಗೃಹವನ್ನು ಸರ್ಕಾರಕ್ಕೆ ಮರಳಿಸಲಾಗುವುದು ಎಂದು ಸ್ವಾಮಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹೀಗಾಗಿ, ತಮ್ಮ ಖಾಸಗಿ ನಿವಾಸದಲ್ಲಿ ಭದ್ರತೆ ನೀಡುತ್ತಿಲ್ಲ ಎಂದು ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥಪಡಿಸಿತು.
ಝಡ್ ಕೆಟಗರಿ ಭದ್ರತೆಗೆ ಅರ್ಹರಾದ ಸ್ವಾಮಿಗೆ 2016ರ ಜನವರಿಯಲ್ಲಿ 5 ವರ್ಷಗಳ ಕಾಲ ದೆಹಲಿಯ ಸರ್ಕಾರಿ ಬಂಗಲೆಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು. ರಾಜ್ಯಸಭೆ ಸದಸ್ಯರಾಗಿ ಅವರ ಅಧಿಕಾರಾವಧಿ ಕೊನೆಗೊಂಡ ಬಳಿಕ ಬಂಗಲೆ ಖಾಲಿ ಮಾಡುವಂತೆ ಕೇಳಿ ಕೊಳ್ಳಲಾಗಿತ್ತು. ಐದು ವರ್ಷಗಳವರೆಗೆ ಸರ್ಕಾರ ಬಂಗಲೆ ಒದಗಿಸಿದ್ದನ್ನು ಗಮನಿಸಿದ್ದ ದೆಹಲಿ ಹೈಕೋರ್ಟ್ ಬಂಗಲೆ ಮರು ಹಂಚಿಕೆ ಕೋರಿದ್ದ ಸ್ವಾಮಿ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.
ಸರ್ಕಾರಕ್ಕೆ ತಮ್ಮ ಬಂಗಲೆ ಹಸ್ತಾಂತರಿಸುವಂತೆ ಸ್ವಾಮಿ ಅವರಿಗೆ ಹೈಕೋರ್ಟ್ ನಿರ್ದೇಶಿಸಿದಾಗ, ತಾವಿರುವ ಖಾಸಗಿ ನಿವಾಸದಲ್ಲಿ ಭದ್ರತೆ ಒದಗಿಸುವುದಾಗಿ ಕೇಂದ್ರ ಭರವಸೆ ನೀಡಿತ್ತಾದರೂ ಯಾವುದೇ ಭದ್ರತೆ ಒದಗಿಸಲಿಲ್ಲ. ಭದ್ರತೆಗಾಗಿ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ತಮ್ಮ ಖಾಸಗಿ ನಿವಾಸಕ್ಕೆ ಯಾರೂ ಭೇಟಿ ನೀಡಿಲ್ಲ ಎಂದು ಅವರು ಆರೋಪಿಸಿ ಅರ್ಜಿ ಸಲ್ಲಿಸಿದ್ದರು.
ಹಿರಿಯ ವಕೀಲ ಜಯಂತ್ ಮೆಹ್ತಾ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಸ್ವಾಮಿ ಅವರು, ಸರ್ಕಾರಿ ವಸತಿ ಗೃಹವನ್ನು ಬಿಡಲು ಒಪ್ಪಿಗೆ ನೀಡುವ ಬಗ್ಗೆ ಕೇಂದ್ರ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ. ಆದರೆ ಇದುವರೆಗೆ ಅಂತಹ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಭದ್ರತೆಗೆ ಸಂಬಂಧಿಸಿದಂತೆ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
ಇದನ್ನೂ ಓದಿ: ಆರು ವಾರಗಳಲ್ಲಿ ಸರ್ಕಾರಿ ಬಂಗಲೆ ಖಾಲಿ ಮಾಡಿ: ಸುಬ್ರಮಣಿಯನ್ ಸ್ವಾಮಿಗೆ ದೆಹಲಿ ಹೈಕೋರ್ಟ್ ಆದೇಶ