ಹೈದರಾಬಾದ್ : ಐದು ವರ್ಷದ ಪುಟ್ಟ ಬಾಲಕನೊಬ್ಬನ ಮೇಲೆ ನಾಯಿಗಳ ಹಿಂಡೊಂದು ಭೀಕರ ದಾಳಿ ನಡೆಸಿರುವ ಮತ್ತೊಂದು ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಸೋಮವಾರ ರಾತ್ರಿ ಚೈತನ್ಯಪುರಿ ಪ್ರದೇಶದಲ್ಲಿ ಘಟನೆ ನಡೆದಿದೆ. ಕಳೆದ 24 ಗಂಟೆಗಳಲ್ಲಿ ಮಗುವಿನ ಮೇಲೆ ಬೀದಿನಾಯಿಗಳು ದಾಳಿ ಮಾಡಿರುವ ಎರಡನೇ ಘಟನೆ ಇದಾಗಿದೆ. ಮಗುವನ್ನು ರಿಷಿ ಎಂದು ಗುರುತಿಸಲಾಗಿದ್ದು, ಮಾರುತಿ ನಗರ ಕಾಲೋನಿಯ ರಸ್ತೆ ನಂ. 19 ರಲ್ಲಿ ಮಗುವಿನ ಕಿರುಚಾಟ ಕೇಳಿದ ಬಾಲಕನ ಪೋಷಕರು ಮತ್ತು ಸುತ್ತಮುತ್ತಲಿನ ನಿವಾಸಿಗಳು ನಾಯಿಗಳನ್ನು ಓಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೀದಿನಾಯಿ ಹಾವಳಿಯ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ. ಈ ಹಿಂದೆ ಕಾಲೋನಿಯಲ್ಲಿ ಬೀದಿನಾಯಿಗಳು ನಿವಾಸಿಗಳನ್ನು ಅಟ್ಟಾಡಿಸಿಕೊಂಡು ಹೋದಾಗ ನಾವು ದೂರು ನೀಡಿದ್ದೆವು. ಆಗ ಕೆಲ ನಾಯಿಗಳನ್ನು ಅವರು ಹಿಡಿದುಕೊಂಡು ಹೋಗಿದ್ದರು ಎಂದು ಗಾಯಾಳು ಬಾಲಕನ ತಾಯಿ ಹೇಳಿದರು. ಆದರೆ, ಕಾಲೋನಿಯ ಕೆಲ ನಿವಾಸಿಗಳು ನಾಯಿಗಳಿಗೆ ಆಹಾರ ಕೊಡುತ್ತಿದ್ದಾರೆ ಎಂದು ಅವರು ದೂರಿದರು.
ನಗರದ ಅಮೀರ್‌ಪೇಟ್ ಪ್ರದೇಶದಲ್ಲಿ ಬೀದಿ ನಾಯಿಗಳ ಗುಂಪೊಂದು ನಾಲ್ಕು ವರ್ಷದ ಬಾಲಕನನ್ನು ಕಚ್ಚಿ ಸಾಯಿಸಿದ್ದನ್ನು ತೋರಿಸಿದ ವಿಡಿಯೋ ವೈರಲ್ ಆದ ನಂತರ ಇದೇ ರೀತಿಯ ಮತ್ತೊಂದು ದುರಂತ ಘಟನೆ ನಡೆದಿದೆ. ಹಿಂದಿನ ಘಟನೆಯ ವೈರಲ್ ವಿಡಿಯೋದಲ್ಲಿ ಬಾಲಕನೊಬ್ಬ ಆಟೋಮೊಬೈಲ್ ವರ್ಕ್‌ಶಾಪ್ ಒಂದರ ಬಳಿ ಸುತ್ತಾಡುತ್ತಿರುವುದು ಮತ್ತು ಆತನನ್ನು ನಾಯಿಗಳ ಗುಂಪೊಂದು ಸುತ್ತುವರಿಯುವುದು ಕಾಣಿಸುತ್ತದೆ. ಸುತ್ತಮುತ್ತ ಯಾರೂ ಇಲ್ಲದ ಕಾರಣ ನಾಯಿಯೊಂದು ಮಗುವನ್ನು ನೆಲಕ್ಕೆ ತಳ್ಳಿದೆ. ಮಗು ಎದ್ದೇಳಲು ಪ್ರಯತ್ನಿಸುತ್ತಿರುವಾಗ, ಇನ್ನೊಂದು ನಾಯಿ ಮತ್ತೆ ನೆಲಕ್ಕೆ ತಳ್ಳುತ್ತದೆ. ನಂತರ ನಾಯಿಗಳು ಮಗುವನ್ನು ಕಚ್ಚುವುದು ಕಾಣಿಸುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಮಗುವಿನ ತಂದೆ ಮಗುವನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಮಾರ್ಗ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದರು.
ಅಮೀರ್ಪೇಟ್ನಲ್ಲಿ ಬೀದಿ ನಾಯಿಗಳ ದಾಳಿಯಿಂದ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೇಯರ್ ಜಿ ವಿಜಯ ಲಕ್ಷ್ಮಿ ಇಡೀ ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಮಂಗಳವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೇಯರ್, ಮಗುವಿನ ಜೀವ ಬಲಿ ತೆಗೆದುಕೊಂಡ ಘಟನೆ ಅತ್ಯಂತ ದುರದೃಷ್ಟಕರ. ರಾಜ್ಯ ಸರ್ಕಾರದ ಪರವಾಗಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಬಾಲಕನ ಪೋಷಕರಿಗೆ ನೆರವು ನೀಡಲಿದೆ ಎಂದರು.
ಬೀದಿ ನಾಯಿಗಳು ಜನರ ಮೇಲೆ ಹಾಗೂ ವಿಶೇಷವಾಗಿ ಮಕ್ಕಳ ಮೇಲೆ ದಾಳಿ ಮಾಡುವ ಸಮಸ್ಯೆ ಪರಿಹರಿಸಲು ಜಿಎಚ್ಎಂಸಿ ತನ್ನ ಎಲ್ಲಾ 30 ವಲಯಗಳಲ್ಲಿ ವಿಶೇಷ ನಾಯಿ ದತ್ತು ಕಾರ್ಯಕ್ರಮವನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದೆ. ಆರಂಭಿಕವಾಗಿ ನಾಗರಿಕರ ಸಹಾಯದಿಂದ ಜಿಎಚ್ಎಂಸಿ ತನ್ನ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 600 ನಾಯಿಗಳನ್ನು ದತ್ತು ಪಡೆಯುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಶಾಲೆಗೆ ಹೋಗ್ತಿದ್ದಾಗ ಲಿಫ್ಟ್ನಲ್ಲಿ ಬಾಲಕನ ಕೈ ಕಚ್ಚಿದ ನಾಯಿ: ವಿಡಿಯೋ