ರೂಪನಗರ(ಪಂಜಾಬ್): ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸಭಾ ಭವನದ ಹೊರಗೆ ಖಲಿಸ್ತಾನ್ ಧ್ವಜಗಳು ಮತ್ತು ಗೋಡೆ ಬರಹಗಳ ಪ್ರಕರಣದಲ್ಲಿ ಪೊಲೀಸರಿಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಕಿ ಪಡೆ ಪಂಜಾಬ್ ಮೂಲದ ಮತ್ತೊಬ್ಬ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ರಾಜಧಾನಿ ಧರ್ಮಶಾಲಾದಲ್ಲಿರುವ ವಿಧಾನಸೌಧದ ಮುಂಭಾಗ ಹಾರಿಸಲಾದ ಖಲಿಸ್ತಾನ್ ಧ್ವಜಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪಂಜಾಬ್ ಮೂಲದ ಪರಮ್‌ಜಿತ್‌ನನ್ನು ಬಂಧಿಸಿದ್ದಾರೆ.
ಮೇ 8ರ ಭಾನುವಾರ ಬೆಳಗ್ಗೆ ಧರ್ಮಶಾಲಾದಲ್ಲಿರುವ ವಿಧಾನಸಭೆಯ ಮುಖ್ಯ ಗೇಟ್ ಮತ್ತು ಗಡಿ ಗೋಡೆಯ ಮೇಲೆ ಖಲಿಸ್ತಾನ್ ಧ್ವಜಗಳನ್ನು ಕಟ್ಟಿದ್ದು ಕಂಡು ಬಂದಿತ್ತು. ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿದಂತೆ ಎಸ್ಪಿ ಪ್ರತಿಕ್ರಿಯಿಸಿ, ಇದು ಮೇ 8 ತಡರಾತ್ರಿ ಇಲ್ಲವೇ ಬೆಳಗ್ಗೆ ನಡೆದಿರುವ ವಿದ್ಯಮಾನ. ವಿಧಾನಸೌಧದ ಗೇಟ್‌ನಿಂದ ನಾವು ಖಲಿಸ್ತಾನಿ ಧ್ವಜ ತೆರವು ಮಾಡಿದ್ದೇವೆ. ಪಂಜಾಬ್‌ನಿಂದ ರಾಜ್ಯಕ್ಕೆ ಆಗಮಿಸಿದ ಕೆಲವು ಪ್ರವಾಸಿಗರು ಕೃತ್ಯ ಎಸಗಿರುವ ಸಾಧ್ಯತೆ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೆವು' ಎಂದು ಈ ಹಿಂದೆ ಹೇಳಿದ್ದರು.
ಓದಿ: ವಿಧಾನಸಭೆ ಗೇಟ್ನಲ್ಲಿ ಖಲಿಸ್ತಾನ್ ಧ್ವಜ ಹಾರಿಸಿದ್ದು ನಾವೇ: ಒಪ್ಪಿಕೊಂಡ SFJಯಿಂದ ವಿಡಿಯೋ!
ಪ್ರಕರಣದ ಆರೋಪಿಗಳಿಬ್ಬರೂ ಧರ್ಮಶಾಲಾ ಬಳಿ ರಾತ್ರಿ ತಂಗಿದ್ದರು ಎಂದು ತಿಳಿದುಬಂದಿದೆ. ಇದಾದ ಬಳಿಕ ಇಬ್ಬರು ಸ್ಕೂಟರ್ ನಲ್ಲಿ ವಿಧಾನಸೌಧ ಭವನಕ್ಕೆ ತೆರಳಿ ರಾತ್ರೋರಾತ್ರಿ ಧ್ವಜ ಹಾಗೂ ಗೋಡೆ ಮೇಲೆ ಬರಹ ಬರೆದು ವಿಡಿಯೋ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದರು. ಆರೋಪಿಗಳ ಹುಡುಕಾಟಕ್ಕೆ ಹಿಮಾಚಲ ಮತ್ತು ರೂಪನಗರದ ಪೊಲೀಸರು ಜಂಟಿ ಕಾರ್ಯಾಚಾರಣೆ ಕೈಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾದ ಪಂಜಾಬ್‌ನ ಮೊರಿಂದಾ ನಿವಾಸಿ ಹರ್ವೀರ್‌ಸಿಂಗ್ ಎಂಬಾತನನ್ನು ಹಿಮಾಚಲ ಮತ್ತು ರೂಪನಗರದ ಪೊಲೀಸರು ಜಂಟಿ ಕಾರ್ಯಾಚಾರಣೆಯಲ್ಲಿ ಬುಧವಾರ ಬಂಧಿಸಿದ್ದರು. ಹರ್ವೀರ್ ಜೊತೆ ಧರ್ಮಶಾಲಾಗೆ ತೆರಳಿ ಖಲಿಸ್ತಾನ ಧ್ವಜ ಹಾರಿಸಲು ನೆರವಾಗಿದ್ದ ಪರಮ್‌ಜಿತ್ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೇ ಆರೋಪಿಗಳು ಏ.13ರಂದು ರೋಪಾರ್‌ನ ಉಪಆಯುಕ್ತರ ಕಚೇರಿ ಮುಂದೆಯೂ ಖಲಿಸ್ತಾನ ಧ್ವಜವನ್ನು ಹಾರಿಸಿದ್ದರು ಎಂದು ಹೇಳಲಾಗ್ತಿದೆ.
ಪರಮ್‌ಜಿತ್ ಅಲಿಯಾಸ್ ಪಮ್ಮಾ ಬಂಧನವಾಗದ ಕಾರಣ ಹಿಮಾಚಲ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಪೊಲೀಸರು ಆರೋಪಿ ಪಮ್ಮಾ ಶೋಧ ಕಾರ್ಯಾಚರಣೆ ಚುರುಕುಗೊಳಿಸಿದ್ದರು. ಕಾಲ್ ಡೇಟಾ ದಾಖಲೆ ಆಧರಿಸಿ ಪೊಲೀಸರು ಪರಮ್‌ಜಿತ್‌ನ ಸುಳಿವು ಪತ್ತೆ ಹಚ್ಚಿದ್ದರು. ಪೊಲೀಸರು ಆರೋಪಿಯನ್ನು ಹಿಂಬಾಲಿಸುವಾಗ ಸೈದ್‌ಪುರ ಗ್ರಾಮದ ಮನೆಗೆ ನುಗ್ಗಿದ್ದಾನೆ. ಪೊಲೀಸರು ಸಿವಿಲ್ ಡ್ರೆಸ್ನಲ್ಲಿ ಆರೋಪಿ ತಂಗಿದ್ದ ಮನೆ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದರು ಎಂದು ತಿಳಿದುಬಂದಿದೆ.