ಮುಂಬೈ: ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ 25 ವರ್ಷದ ಯುವಕನ ಜೀವ ಉಳಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನನ್ನು ವಶಕ್ಕೆ ಪಡೆದ ಪೊಲೀಸರು, ಆಪ್ತ ಸಮಾಲೋಚನೆಗೆ ಒಳಪಡಿಸಿದ್ದು, ಆತ್ಮಹತ್ಯೆ ಚಿಂತನೆಯಿಂದ ಆತನನ್ನು ಮುಕ್ತಗೊಳಿಸಿದ್ದಾರೆ.
ಏನಿದು ಘಟನೆ: ಮುಂಬೈನ 25 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದಾನೆ. ಈ ಸಂಬಂಧ ಆತ ಇಂಟರ್ನೆಟ್ನಲ್ಲೂ ಹುಡುಕಾಟ ನಡೆಸಿದ್ದಾರೆ. ಈತ ಇಂಟರ್ನೆಟ್ನಲ್ಲಿ ಆತ್ಮಹತ್ಯೆ ಮಾರ್ಗದ ಹುಡುಕಾಟ ನಡೆಸಿರುವ ವಿಷಯ ವಾಷಿಂಗ್ಟನ್ನ ಯುಎಸ್ಎನ್ಸಿಇ ಇಂಟರ್ಪೋಲ್ಗೆ ತಿಳಿದು ಬಂದಿದೆ. ಅವರು ಈ ಸಂಬಂಧ ದೆಹಲಿ ಪೊಲೀಸರಿಗೆ ಜಾಗೃತಿಗೊಳಿಸಿದ್ದಾರೆ. ಈ ವಿಚಾರದ ಗಂಭೀರತೆ ಅರಿತ ದೆಹಲಿ ಇಂಟರ್ಪೋಲ್ ಪೊಲೀಸರು ತಕ್ಷಣಕ್ಕೆ ಮುಂಬೈಅಪರಾಧ ದಳಕ್ಕೆ ಮಾಹಿತಿ ಮುಟ್ಟಿಸಿದ್ದಾರೆ.
ಈ ವಿಚಾರ ಅರಿತ ಮುಂಬೈನ ಕ್ರೈಮ್ ಬ್ರಾಂಚ್ ಅಧಿಕಾರಿಗಳು ಯುವಕ ಪತ್ತೆ ನಡೆಸಿದ್ದಾರೆ. ಪೊಲೀಸ್ ತಾಂತ್ರಿಕ ವಿಶ್ಲೇಷಣಾ ಅಧಿಕಾರಿ ಅಜಿತ್ ಗನಜಿ, ಜೋಗೇಶ್ವರಿ ವೆಸ್ಟ್ನಲ್ಲಿ ವಾಸವಾಗಿದ್ದ ಯುವಕನ ವಶಕ್ಕೆ ಪಡೆದಿದ್ದಾರೆ. ಈ ವೇಳೆ, ವಿಚಾರಿಸಿದಾಗ ಯುವಕ ತಾನು ಆತ್ಮಹತ್ಯೆ ನಡೆಸುವ ಯಾವುದೇ ಪ್ರಯತ್ನ ನಡೆಸಿಲ್ಲ ಎಂದಿದ್ದಾನೆ. ಬಳಿಕ ಆತನ ಇಂಟರ್ನೆಟ್ನಲ್ಲಿ ಆತ್ಮಹತ್ಯೆ ಕುರಿತು ಹೆಚ್ಚಿನ ಶೋಧ ನಡೆಸಿರುವ ಮಾಹಿತಿ ಹೊರಗೆಡವಿದಾಗ, ಮೂರು ನಾಲ್ಕು ಬಾರಿ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಇನ್ನು ಈ ಆತ್ಮಹತ್ಯೆಗೆ ಕಾರಣ ಏನು ಎಂದು ವಿಚಾರಿಸಿದಾಗ ಸಾಲದ ಹೊರೆ ಎಂಬ ಉತ್ತರ ನೀಡಿದ್ದಾನೆ.
ಐಟಿ ಇಂಜಿನಿಯರ್ ಆಗಿರುವ ಆತ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಓದು ಸೇರಿದಂತೆ ಇನ್ನಿತರ ಕಾರಣದಿಂದ ಹೆಚ್ಚಿನ ಸಾಲ ಮಾಡಿದ್ದಾಗಿ ತಿಳಿಸಿದ್ದಾನೆ. ಖಾಸಗಿ ಕಂಪನಿಯಲ್ಲಿ ಕಡಿಮೆ ಸಂಬಳ ಬರುತ್ತಿದ್ದು, ಇದರಿಂದ ದೈನಂದಿನ ಪೂರೈಕೆ ನಿರ್ವಹಣೆ ಮಾಡುವುದೇ ಆಗುತ್ತದೆ. ಸಾಲ ಮತ್ತಷ್ಟು ಬೆಳೆದು ಹೊರೆ ಹೆಚ್ಚಿದೆ. ಇದನ್ನು ತೀರಿಸುವ ಮಾರ್ಗ ತಿಳಿಯದೇ ಇದೀಗ ಆತ್ಮಹತ್ಯೆ ಮೊರೆ ಹೋಗಿದ್ದಾಗಿ ಆತ ತಿಳಿಸಿದ್ದಾನೆ.
ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ಆಪ್ತಸಮಾಲೋಚನೆಗೆ ಒಳಪಡಿಸಿದ್ದು, ಇದೀಗ ಗುಣಮುಖ ಕಾಣುತ್ತಿದ್ದು, ಆತನನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಅಲ್ಲದೇ ಉತ್ತಮ ಮನೋವೈದ್ಯರ ಬಳಿ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದ್ದಾರೆ. ಮಗನ ಜೀವನ ಉಳಿಸಿದ್ದಕ್ಕೆ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಯುವಕ ಕೂಡ ಆತ್ಮಹತ್ಯೆ ಯೋಚನೆ ಕೈ ಬಿಟ್ಟು, ಉತ್ತಮ ಜೀವನ ನಡೆಸುವ ಭವಿಷ್ಯ ನುಡಿದಿದ್ದಾನೆ.
ಗಾಜಿಯಾಬಾದ್ನಲ್ಲೂ ಇದೇ ರೀತಿ ಘಟನೆ : ಕಳೆದ ತಿಂಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡುವ ಮೂಲಕ ಆತ್ಮಹತ್ಯೆಗೆ ಪ್ರಯತ್ನಿಸಿದ 23 ವರ್ಷದ ಯುವಕನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಅಭಯ್ ಶುಕ್ಲಾ ಎಂಬ ಯುವಕ 9- ಸಾವಿರವನ್ನು ಕಳೆದುಕೊಂಡ ಹಿನ್ನಲೆ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಮುಂದಾಗಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಈ ಸಂಬಂಧ ಆತ ಫೇಸ್ಬುಕ್ನಲ್ಲಿ ಲೈವ್ ಮಾಡಿದ್ದ. ಈ ವಿಷಯವನ್ನು ತಿಳಿದ ಕೂಡಲೇ ಆಲರ್ಟ್ ಆದ ಉತ್ತರ ಪ್ರದೇಶದ ಪೊಲೀಸರು ಈ ಸಂಬಂಧ ಗಾಜಿಯಾಬಾದ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಘಟನೆ ತಿಳಿದ 15 ನಿಮಿಷದೊಳಗೆ ಸ್ಥಳಕ್ಕೆ ಆಗಮಿಸಿ, ಯುವಕ ಪ್ರಯತ್ನ ವಿಫಲಗೊಳಿಸಿ, ಆಪ್ತ ಸಮಾಲೋಚನೆಗೆ ಒಳಪಡಿಸಿದ್ದರು.
ಇದನ್ನೂ ಓದಿ: ಪ್ರೇಮ ವಿವಾಹವಾಗಿದ್ದ ಬೆನ್ನಲ್ಲೇ ಪತಿ - ಪತ್ನಿ ಕಲಹ: ಪ್ರೇಮಿಗಳ ದಿನದಂದೇ ನವ ವಿವಾಹಿತೆ ಶವವಾಗಿ ಪತ್ತೆ