ಚೆನ್ನೈ: ಪ್ರತಿಪಕ್ಷವಾದ ಎಐಎಡಿಎಂಕೆಯ ಪ್ರಧಾನ ಕಚೇರಿ "ಎಂಜಿಆರ್ ಮಾಳಿಗೈ" ಬಾಗಿಲನ್ನು ಗುರುವಾರ ತೆರೆಯಲಾಯಿತು. ನಾಯಕರಾದ ಕೆ. ಪಳನಿಸ್ವಾಮಿ ಮತ್ತು ಒ. ಪನ್ನೀರಸೆಲ್ವಂ ಅವರ ಬೆಂಬಲಿಗರ ನಡುವೆ ಹಿಂಸಾಚಾರ ಸಂಭವಿಸಿದ ನಂತರ ಕಂದಾಯ ಅಧಿಕಾರಿಗಳು ಇದನ್ನು ಮುಚ್ಚಿದ್ದರು. ಇದೀಗ 10 ದಿನಗಳ ನಂತರ ಮತ್ತೆ ಬಾಗಿಲು ತೆರೆಯಲಾಗಿದೆ.
ಎರಡು ಗುಂಪುಗಳ ನಡುವಿನ ಘರ್ಷಣೆ ಹಿನ್ನೆಲೆ CrPC ಯ ಸೆಕ್ಷನ್ 145 ರ ಅಡಿ RDO, ಪಕ್ಷದ ಪ್ರಧಾನ ಕಚೇರಿಯನ್ನು ಸೀಲ್ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ ಪಕ್ಷದ ಪ್ರಧಾನ ಕಚೇರಿಗೆ ಬೀಗ ಹಾಕಿರುವುದನ್ನು ಮತ್ತು ಸೀಲಿಂಗ್ನನ್ನು ಪ್ರಶ್ನಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಬುಧವಾರ, ನ್ಯಾಯಮೂರ್ತಿ ಸತೀಶ್ ಕುಮಾರ್ ಅವರು ಅರ್ಜಿಯ ವಿಚಾರಣೆ ನಡೆಸಿ, ಕೀನನ್ನು ಹಸ್ತಾಂತರಿಸುವಂತೆ ಆರ್‌ಡಿಒಗೆ ಸೂಚಿಸಿದರು.
ಇಲ್ಲಿನ ಅವ್ವೈ ಷಣ್ಮುಗಂ ಸಲೈನಲ್ಲಿರುವ ಕಚೇರಿಗೆ ದಿನದ 24 ಗಂಟೆಯೂ ಸೂಕ್ತ ರಕ್ಷಣೆ ನೀಡುವಂತೆ ರಾಯಪೆಟ್ಟಾ ಪೊಲೀಸರಿಗೆ ನ್ಯಾಯಾಧೀಶರು ಸೂಚಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯುವುದನ್ನು ತಪ್ಪಿಸುವ ಸಲುವಾಗಿ ಪಕ್ಷದ ಕಾರ್ಯಕರ್ತರನ್ನು ಒಂದು ತಿಂಗಳವರೆಗೆ ಕಚೇರಿಯೊಳಗೆ ಬಿಡಬಾರದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಇದನ್ನೂ ಓದಿ: ಎ.ಪಳನಿಸ್ವಾಮಿ ಎಐಎಡಿಎಂಕೆ ಹಂಗಾಮಿ ಮುಖ್ಯಸ್ಥ, ಒ.ಪನ್ನೀರಸೆಲ್ವಂ ಉಚ್ಛಾಟನೆ
ನ್ಯಾಯಾಲಯದ ಆದೇಶ ಹಿನ್ನೆಲೆ ಪಕ್ಷದ ಕಾರ್ಯಕರ್ತರು ಇಂದು ಕೇಂದ್ರ ಕಚೇರಿಗೆ ಭೇಟಿ ನೀಡಿಲ್ಲ. ಮೈಲಾಪುರ ತಹಶೀಲ್ದಾರ್ ನೇತೃತ್ವದ ಕಂದಾಯ ಅಧಿಕಾರಿಗಳು, ಪೊಲೀಸರು ಮತ್ತು ಹಿರಿಯ ಮುಖಂಡರಾದ ಮಾಜಿ ಸಚಿವ ಸಿ.ವಿ.ಷಣ್ಮುಗಂ ಮತ್ತು ವಿ.ಮಹಾಲಿಂಗಂ ಅವರ ಸಮ್ಮುಖದಲ್ಲಿ ಪ್ರವೇಶ ದ್ವಾರಗಳು ಹಾಗೂ ಕೇಂದ್ರ ಕಚೇರಿಯ ಇತರ ಎರಡು ಸ್ಥಳಗಳಲ್ಲಿನ ಸೀಲ್ ಮತ್ತು ಬೀಗವನ್ನು ತೆಗೆದುಹಾಕಲಾಯಿತು. ಅಧಿಕಾರಿಗಳು ಪಕ್ಷದ ವ್ಯವಸ್ಥಾಪಕರಿಗೆ ಕೀಗಳನ್ನು ಹಸ್ತಾಂತರಿಸಿದರು.