ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಇಂದಿನಿಂದ ಶಾಲೆಗಳು ಪುನಾರಂಭಗೊಂಡಿದ್ದು, ದೀರ್ಘಾವಧಿ ಬಳಿಕ ಮಕ್ಕಳು ವಿದ್ಯಾದೇಗುಲಗಳತ್ತ ಮುಖ ಮಾಡಿದ್ದಾರೆ.
ಕೊರೊನಾ ಸಾಂಕ್ರಾಮಿಕದಿಂದಾಗಿ ದೆಹಲಿಯಲ್ಲಿ 2020ರ ಮಾರ್ಚ್ 19ರಂದು ಶಾಲೆಗಳನ್ನು ಮುಚ್ಚಲಾಗಿತ್ತು. ಇಂದಿನಿಂದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ 10 ಮತ್ತು 12ನೇ ತರಗತಿಗಳು ಮಾತ್ರ ಆರಂಭವಾಗಿದೆ.
ದೆಹಲಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಶಿಕ್ಷಣ ಇಲಾಖೆಯ ಹಿರಿಯ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಸರ್ಕಾರಿ ಅನುದಾನಿತ / ಅನುದಾನರಹಿತ ಶಾಲೆಗಳನ್ನು ತೆರೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ಹೊಸ ಗೌಪ್ಯತೆ ನೀತಿ ವಿರುದ್ಧ ಇಂದು ದೆಹಲಿ ಹೈಕೋರ್ಟ್ನಲ್ಲಿ ವಿಚಾರಣೆ
2020ರ ಮಾರ್ಚ್ 21 ರಂದು ರಾಜಸ್ಥಾನದಲ್ಲಿ ಶಾಲೆಯ ಕೊನೆಯ ಗಂಟೆ ಬಾರಿಸಿತ್ತು. ಜನವರಿ 11 ರಿಂದ ರಾಜ್ಯದಲ್ಲಿ ಕೋಚಿಂಗ್ ಇನ್ಸ್ಟಿಟ್ಯೂಟ್ ಮತ್ತು ನರ್ಸಿಂಗ್ ಕಾಲೇಜುಗಳು ಪ್ರಾರಂಭವಾಗಿತ್ತು. ಇಂದಿನಿಂದ 9ರಿಂದ 12ನೇ ತರಗತಿಗಳನ್ನು ಮಾತ್ರ ತೆರೆಯಲು ಸರ್ಕಾರ ಆದೇಶ ಹೊರಡಿಸಿದೆ.
ಅನೇಕ ರಾಜ್ಯಗಳಲ್ಲಿ ಜನವರಿಯಿಂದ ಶಾಲಾ - ಕಾಲೇಜುಗಳು ಮತ್ತೆ ಆರಂಭಗೊಂಡಿದ್ದು, ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲ ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದೆ. ಕೆಲವೊಂದು ಶಾಲೆಗಳ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ದೈಹಿಕ ಅಂತರ ಕಾಪಾಡಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ತಿಳಿಯಲು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.