ತಿರುವನಂತಪುರಂ : ಕೋವಿಡ್ ಕಾರಣ ಕಳೆದ 10 ತಿಂಗಳಿನಿಂದ ಮುಚ್ಚಿದ್ದ ಕೇರಳದ ಶಾಲೆಗಳು ಇಂದಿನಿಂದ ಭಾಗಶಃ ಪುನಾರಂಭವಾಗಿವೆ. ಹೊಸ ವರ್ಷದಂದು ಹತ್ತು ಮತ್ತು ಹನ್ನೆರಡನೇ ತರಗತಿ ವಿದ್ಯಾರ್ಥಿಗಳು ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ.
ಕೋವಿಡ್ ಮಾರ್ಗಸೂಚಿಗಳನ್ನು ಸಂಪೂರ್ಣ ಪಾಲಿಸಿಕೊಂಡು ತರಗತಿಗಳನ್ನು ಪುನಾರಂಭ ಮಾಡಲಾಗಿದೆ. ಆನ್ಲೈನ್ ಮತ್ತು ಡಿಜಿಟಲ್ ತರಗತಿಗಳಲ್ಲಿ ಕಲಿಸಲಾದ ವಿಷಯಗಳಲ್ಲಿನ ಗೊಂದಲಗಳನ್ನು ಪ್ರಾಧ್ಯಾಪಕರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಓದಿ : ಇಂದಿನಿಂದ ಶಾಲೆಗಳ ಆರಂಭ : ಇದರ ನಡುವೆ ಕೊರೊನಾ ಭೀತಿ
ಶಾಲೆಗೆ ಆಗಮಿಸುವ ಎಲ್ಲಾ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಮಾಹಿತಿ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ತರಗತಿಯಲ್ಲಿ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದು ಬೆಂಚಿನಲ್ಲಿ ಒಬ್ಬ ಅಥವಾ ಇಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಲಾಗುತ್ತಿದೆ. ಇಷ್ಟೆಲ್ಲಾ ಸಾಹಸದ ನಡುವೆ, ಹೊಸ ವರ್ಷದಂದು ಹೊಸ ಹುರುಪಿನೊಂದಿಗೆ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದ್ದಾರೆ.
ತಿರುವನಂತಪುರಂನಲ್ಲಿ ನೂತನ ಮೇಯರ್ ಆರ್ಯ ರಾಜೇಂದ್ರನ್ ಶಾಲೆಗಳಿಗೆ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿಗಳು ಮತ್ತು ನೈರ್ಮಲ್ಯ ಪದ್ಧತಿಗಳನ್ನು ಅನುಸರಿಸಲಾಗಿದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ. ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೆ ಪಾಲಿಸುವಂತೆ ಸೂಚಿಸಿದ್ದಾರೆ.