ಅಜಂಗಢ (ಉತ್ತರ ಪ್ರದೇಶ): ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಶಾಲೆಯೊಂದರ ಮುಖ್ಯೋಪಾಧ್ಯಾಯರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಅಜಂಗಢ ಜಿಲ್ಲೆಯ ಜಿಯಾನ್‌ಪುರ ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆ.
ಸಂಜಯ್ ಯಾದವ್(46) ಮೃತರು. ಇಮಾ ಗ್ರಾಮದ ನಿವಾಸಿಯಾಗಿದ್ದ ಇವರು ಹರಯಾ ಬ್ಲಾಕ್‌ನ ಅಖೈಪುರದ ಸಂಯುಕ್ತ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ದುಷ್ಕರ್ಮಿಗಳು ಯಾದವ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಗುಂಡಿನ ಸದ್ದು ಕೇಳಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರು ಸ್ಥಳಕ್ಕಾಗಮಿಸಿ ಗಾಯಗೊಂಡ ಮುಖ್ಯೋಪಾಧ್ಯಾಯರನ್ನು ನಗರದ ಖಾಸಗಿ ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
'ಅಜಂಗಢ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ನೇತೃತ್ವದ ಪೊಲೀಸ್ ತಂಡವು ತನಿಖೆಗಾಗಿ ಸ್ಥಳಕ್ಕೆ ಭೇಟಿ ನೀಡಿದೆ. ಹಂತಕರನ್ನು ಗುರುತಿಸಿದ್ದು, ಬಂಧನಕ್ಕೆ ಶೋಧ ಕಾರ್ಯ ಆರಂಭಿಸಲಾಗಿದೆ. ಪಂಚಾಯತಿ ಚುನಾವಣೆಯ ವೈಷಮ್ಯದಿಂದ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳು ಕ್ರಿಮಿನಲ್ ಇತಿಹಾಸ ಹೊಂದಿದ್ದಾರೆ. ಪೊಲೀಸರು ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಿದ್ದು ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು' ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು : ಸಿಸಿಟಿವಿಯಲ್ಲಿ ದೃಶ್ಯ ಸೆರೆ