ನವದೆಹಲಿ: ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಿತ ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಇದೀಗ ಈ ಎಲ್ಲ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಿ ದೆಹಲಿ ಪೊಲೀಸರಿಗೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಬಂಧನದಿಂದ ರಕ್ಷಣೆ ನೀಡುವಂತೆಯೂ ಹಾಗೂ ತಮ್ಮ ವಿರುದ್ಧ ದಾಖಲಾದ ಎಲ್ಲ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸುವಂತೆ ಕೋರಿ ನೂಪುರ್ ಶರ್ಮಾ ಈ ಹಿಂದೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ನ್ಯಾಯಪೀಠವು ಇಂದು ಮಹತ್ವದ ಆದೇಶ ಹೊರಹಾಕಿತು. ಇದರ ಜೊತೆಗೆ ಮುಂದಿನ ವಿಚಾರಣೆಯವರೆಗೂ ಬಂಧನದಿಂದಲೂ ಮುಕ್ತಿ ನೀಡಿದೆ.
ಜುಲೈ 1ರಂದು ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಛ ನ್ಯಾಯಾಲಯ ಬಿಜೆಪಿ ಮಾಜಿ ವಕ್ತಾರೆಗೆ ರಿಲೀಫ್ ನೀಡಿ, ಮುಂದಿನ ವಿಚಾರಣೆಯ ದಿನಾಂಕದವರೆಗೂ ಬಂಧಿಸದಂತೆ ಆದೇಶಿಸಿತ್ತು. ಜೊತೆಗೆ ಅವರ ವಿರುದ್ಧ ದಾಖಲಾಗಿರುವ ಎಲ್ಲ ಎಫ್‌ಐಆರ್‌ಗಳನ್ನು ಒಟ್ಟಿಗೆ ಸೇರಿಸಲು ತಿಳಿಸಿ, ಆಗಸ್ಟ್ 10ಕ್ಕೆ(ಇವತ್ತಿಗೆ) ವಿಚಾರಣೆ ಮೂಂದೂಡಿತ್ತು.
ಇದನ್ನೂ ಓದಿ: ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್ನಿಂದ ರಿಲೀಫ್... ಸದ್ಯಕ್ಕೆ ಬಂಧನ ಮಾಡದಂತೆ ಸೂಚನೆ
ನೂಪುರ್ ಶರ್ಮಾ ವಿರುದ್ಧ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸೋಂ ರಾಜ್ಯಗಳಲ್ಲಿ ಕೇಸು ದಾಖಲಾಗಿವೆ.