ನವದೆಹಲಿ: ಮೋದಿ ಉಪನಾಮ ಪ್ರಕರಣದಲ್ಲಿ ತಮಗೆ ವಿಧಿಸಲಾಗಿರುವ 2 ವರ್ಷಗಳ ಜೈಲು ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು, ಜುಲೈ 21 ರಂದು ದಿನಾಂಕ ನಿಗದಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಹಿರಿಯ ವಕೀಲ ಎ ಎಂ ಸಿಂಘ್ವಿ ಅವರು ಅರ್ಜಿಯನ್ನು ಪ್ರಸ್ತಾಪಿಸಿದರು. ಈ ವೇಳೆ ನ್ಯಾಯಮೂರ್ತಿಗಳು ವಿಚಾರಣೆಗೆ ಪಟ್ಟಿ ಮಾಡಲು ಒಪ್ಪಿಗೆ ನೀಡಿದರು.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಮೋದಿ ಉಪನಾಮ ಬಳಕೆಯ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ನೀಡಲಾದ ಶಿಕ್ಷೆಗೆ ತಡೆ ನೀಡಲು ಕೋರಿ ಗುಜರಾತ್ ಹೈಕೋರ್ಟ್ಗೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಆದೇಶ ಸರಿಯಾಗಿದ್ದು, ಶಿಕ್ಷೆಗೆ ತಡೆ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಶನಿವಾರ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಕೆಳಹಂತದಿಂದ ಹಿಡಿದು ಹೈಕೋರ್ಟ್ವರೆಗೂ ವಿಚಾರಣೆ ನಡೆದಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದ್ದ ಹೈಕೋರ್ಟ್, ಜುಲೈ 7 ರಂದು ದೋಷಾರೋಪಣೆಗೆ ತಡೆ ಕೋರಿ ರಾಹುಲ್ ಗಾಂಧಿಯವರ ಮನವಿಯನ್ನು ತಿರಸ್ಕರಿಸಿತ್ತು. ಈ ಹಿಂದೆ ಅರ್ಜಿಯ ವಿಚಾರಣೆ ವೇಳೆ ಅನರ್ಹಗೊಂಡ ಸಂಸದರಿಗೆ ಮಧ್ಯಂತರ ಪರಿಹಾರ ನೀಡಲು ನ್ಯಾಯಮೂರ್ತಿಗಳು ನಿರಾಕರಿಸಿದ್ದರು. ಜಾಮೀನು ನೀಡಬಹುದಾದ, ಅರಿಯಲಾಗದ ಅಪರಾಧಕ್ಕಾಗಿ ತಮ್ಮ ಕಕ್ಷಿದಾರರು ಎರಡು ವರ್ಷಗಳ ಗರಿಷ್ಠ ಶಿಕ್ಷೆಗೆ ಒಳಪಟ್ಟಿದ್ದು, ಲೋಕಸಭಾ ಸ್ಥಾನವನ್ನು ಕಳೆದುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಪರ ವಕೀಲರು ವಾದಿಸಿದ್ದರು.
ಏನಿದು ಪ್ರಕರಣ?: 2019ರ ಲೋಕಸಭೆಯ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದರು. ಎಲ್ಲ ಕಳ್ಳರು ಮೋದಿ ಎಂಬ ಉಪನಾಮ ಹೇಗೆ ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಮೋದಿ ಉಪನಾಮದ ಟೀಕೆ ವಿರುದ್ಧ ಗುಜರಾತ್ನ ಸೂರತ್ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದೇ ಮಾರ್ಚ್ 23ರಂದು ಪ್ರಕರಣದ ತೀರ್ಪು ನೀಡಿದ್ದ ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499 ಮತ್ತು 500ರ ಅಡಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ, ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ತೀರ್ಪಿನ ಪರಿಣಾಮ ರಾಹುಲ್ ಗಾಂಧಿ ತಮ್ಮ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
ಇದನ್ನೂ ಓದಿ: Opposition parties meeting: ರಾಹುಲ್ ಗಾಂಧಿ 'ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ'.. ಬೆಂಗಳೂರು ಸಭೆ ನಡುವೆ ಹೀಗೊಂದು ಚರ್ಚೆ