ನವದೆಹಲಿ: ರಾಜ್ಯಪಾಲರು ಮಸೂದೆಗಳಿಗೆ ಅಂಕಿತ ಹಾಕಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಕುರಿತು ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ವರದಿಯನ್ನು ಶುಕ್ರವಾರದೊಳಗೆ ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೋಮವಾರ ಸೂಚನೆ ಕೊಟ್ಟಿತು. ಇದೇ ವೇಳೆ ರಾಜ್ಯಪಾಲರ ನಡೆಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯಪಾಲರು ಚುನಾಯಿತ ಪ್ರತಿನಿಧಿಯಲ್ಲ- ಸುಪ್ರೀಂ ಕೋರ್ಟ್: ''ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ವಿಧಾನಸಭೆಯಿಂದ ಅಂಗೀಕರಿಸಿದ ಮಸೂದೆಗಳ ಬಗ್ಗೆ ತೆಗೆದುಕೊಂಡ ಕ್ರಮಗಳ ವಿವರಗಳನ್ನು ದಾಖಲೆಗಳಲ್ಲಿ ಸೇರಿಸಬೇಕು'' ಎಂದು ಕೋರ್ಟ್ ಹೇಳಿದೆ. ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ, ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಈ ವಿಷಯಗಳು ಸುಪ್ರೀಂ ಕೋರ್ಟ್‌ಗೆ ತಲುಪುವ ಮೊದಲೇ ಅವರು ಮಸೂದೆಗಳ ಮೇಲೆ ಕಾರ್ಯನಿರ್ವಹಿಸಬೇಕಾಗಿತ್ತು. ತಾವು ಚುನಾಯಿತ ಪ್ರತಿನಿಧಿಯಲ್ಲ ಎನ್ನುವುದನ್ನು ರಾಜ್ಯಪಾಲರು ತಿಳಿದಿರಬೇಕು ಎಂದು ಗರಂ ಆಗಿದೆ.
ಜೂನ್‌ನಲ್ಲಿ ವಿಧಾನಸಭೆ ಅಂಗೀಕರಿಸಿದ ನಾಲ್ಕು ಮಸೂದೆಗಳು ಮತ್ತು ಈ ಮೊದಲು ಮಂಡಿಸಿದ ಮೂರು ಹಣಕಾಸಿನ ಮಸೂದೆಗಳಿಗೆ ರಾಜ್ಯಪಾಲ ಪುರೋಹಿತ್ ಅವರು ತಮ್ಮ ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಪಂಜಾಬ್ ಸರ್ಕಾರ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಪಕ್ಷಗಳೇಕೆ ಸುಪ್ರೀಂ ಕೋರ್ಟ್‌ಗೆ ಬರಬೇಕು? ರಾಜ್ಯಪಾಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮುನ್ನವೇ ಕ್ರಮ ಕೈಗೊಳ್ಳಬೇಕು. ಇದು ಇನ್ನೊಂದು ರಾಜ್ಯದಲ್ಲೂ ನಡೆದಿದೆ (ತೆಲಂಗಾಣ ಸರ್ಕಾರವನ್ನು ಉಲ್ಲೇಖಿಸಿ). ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ ನಂತರ, ರಾಜ್ಯಪಾಲರು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತಾರೆ. ರಾಜ್ಯಪಾಲರ ವಿಳಂಬದ ವಿರುದ್ಧ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಕೂಡಾ ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಿವೆ. ಕೇರಳ ಸರ್ಕಾರದ ಪರ ಹಿರಿಯ ವಕೀಲ ಕೆ.ಕೆ.ವೇಣುಗೋಪಾಲ್ ಅವರು ಸಿಜೆಐ ನೇತೃತ್ವದ ಪೀಠದ ಮುಂದೆ ತುರ್ತು ವಿಚಾರಣೆಗಾಗಿ ಈ ವಿಷಯವನ್ನು ಪ್ರಸ್ತಾಪಿಸಿದರೆ, ತಮಿಳುನಾಡು ಸರ್ಕಾರದ ಅರ್ಜಿಯನ್ನು ಕೋರ್ಟ್ ನವೆಂಬರ್ 10ರಂದು ವಿಚಾರಣೆ ನಡೆಸಲಿದೆ.
ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರು ಅಧಿವೇಶನ ಕರೆಯುವ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಆಧಾರದ ಮೇಲೆ ಒಪ್ಪಿಗೆ ನೀಡಲು ಕೂಡ ನಿರಾಕರಿಸಿದ್ದಾರೆ ಎಂದು ವಿವರಿಸಿದರು. ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ ನಂತರ, ರಾಜ್ಯಪಾಲರು ಎರಡು ಹಣಕಾಸಿನ ಮಸೂದೆಗಳನ್ನು ಸದನದಲ್ಲಿ ಮಂಡಿಸಲು ಶಿಫಾರಸು ಮಾಡಿದ್ದಾರೆ ಎಂದು ಇದೇ ವೇಳೆ ಅಡ್ವೊಕೇಟ್ ಜನರಲ್ ತಿಳಿಸಿದರು.
ರಾಜ್ಯಪಾಲರ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪುರೋಹಿತ್ ಅವರು ಸೂಕ್ತ ಕ್ರಮ ಕೈಗೊಂಡಿದ್ದು, ಶುಕ್ರವಾರದೊಳಗೆ ನವೀಕರಿಸಿದ ವರದಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದರು.
ಇದನ್ನೂ ಓದಿ: ಮಧ್ಯಪ್ರದೇಶ: ಪ್ರಿಯಾಂಕ ಗಾಂಧಿ ಭಾಷಣದಲ್ಲಿ ಮೋದಿ, ಅದಾನಿ ವಿರುದ್ಧ ವಾಗ್ದಾಳಿ