ನವದೆಹಲಿ : ಐಎನ್‌ಎಸ್ ವಿರಾಟ್ ಯುದ್ಧ ವಿಮಾನ ವಾಹಕ ನೌಕೆ ಮರುಸ್ಥಾಪನೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಐಎನ್‌ಎಸ್ ವಿರಾಟ್ ನಾಶಪಡಿಸುವ ಮೇಲಿನ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ಇಂದು ರದ್ದುಪಡಿಸಿದೆ. ಯುದ್ಧನೌಕೆಯನ್ನು ಪುನಃಸ್ಥಾಪಿಸಲು ಮತ್ತು ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಕೋರಿ ಸಲ್ಲಿಸಿದ ಎಂ/ಎಸ್ ಎನ್ವಿಟೆಕ್ ಮೆರೈನ್ ಕನ್ಸಲ್ಟೆಂಟ್ಸ್ ಖಾಸಗಿ ಲಿಮಿಟೆಡ್ ಮತ್ತು ಇತರರ ಮನವಿ ತಿರಸ್ಕರಿಸಿತು.
ತನ್ನ ಕೊನೆಯ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಶೇ.50ರಷ್ಟು ನಾಶವಾದ ನಂತರ ಅದನ್ನು ಪುನಾ ಸ್ಥಾಪಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿತ್ತು. ಸಿಜೆಐ ಎಸ್ ಎ ಬೊಬ್ಡೆ, ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಮತ್ತು ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಲಿರುವ ಸುಶೀಲ್ ಚಂದ್ರ
ಯುದ್ಧವಿಮಾನ ವಾಹಕ ನೌಕೆ ಐಎನ್ಎಸ್ ವಿರಾಟ್ ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿತ್ತು. ಐಎನ್‌ಎಸ್ ವಿರಾಟ್ ವಿಶ್ವದಲ್ಲೇ ದೀರ್ಘಾವಧಿಯ ಸೇವೆ ಸಲ್ಲಿಸಿದ ಯುದ್ಧ ನೌಕೆಯಾಗಿದೆ.
ಭಾರತಕ್ಕೆ ಮಾರಾಟವಾಗುವುದಕ್ಕೂ ಮೊದಲು 1959ರಿಂದ 1986ರವರೆಗೆ ಬ್ರಿಟನ್‌ನ ‘ರಾಯಲ್ ನೇವಿ’ಯಲ್ಲಿ ಈ ನೌಕೆ ಸೇವೆ ಸಲ್ಲಿಸಿತ್ತು. ಬಳಿಕ 1986ರಲ್ಲಿ ಭಾರತೀಯ ನೌಕಾಪಡೆಗೆ 65 ದಶಲಕ್ಷ ಡಾಲರ್‌ಗೆ ಮಾರಾಟವಾಯಿತು. 1987ರಿಂದ ಸೇವೆ ಆರಂಭಿಸಿ, 2017ರಲ್ಲಿ ನಿವೃತ್ತಿ ಹೊಂದಿತ್ತು. ಹಲವು ಮಹತ್ತರ ಕಾರ್ಯಾಚರಣೆ, ಯುದ್ಧಗಳಲ್ಲೂ ಭಾಗವಹಿಸಿದೆ.