ನವದೆಹಲಿ: ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಮೂರ್ತಿಯಾಗಿದ್ದ ಎಂ.ಆರ್ ಶಾ ಅವರು ಇಂದು ತಮ್ಮ ಸೇವೆಯಿಂದ ನಿವೃತ್ತಿ ಹೊಂದಿದರು. ಕೊನೆಯ ಬಾರಿಗೆ ಎಂ.ಆರ್ ಶಾ ಅವರು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಡಿ,ವೈ ಚಂದ್ರಚೂಡ್ ಅವರ ಜೊತೆ ನ್ಯಾಯ ಪೀಠದಲ್ಲಿ ಕುಳಿತು ವಿದಾಯದ ಭಾಷಣ ಮಾಡಿದರು.
ಭಾಷಣದ ಕೊನೆಯಲ್ಲಿ ಅವರ ಕಣ್ಣಂಚಲ್ಲಿ ನೀರು ತುಂಬಿದ್ದವು. ಈ ವೇಳೆ ಬಾಲಿವುಡ್ನ ಖ್ಯಾತ ನಟ ರಾಜ್ ಕಪೂರ್ ಅಭಿನಯದ 'ಮೇರಾ ನಾಮ್ ಜೋಕರ್' ಚಿತ್ರದ "ಕಲ್ ಖೇಲ್ ಮೆ ಹಮ್ ಹೋ ನಾ ಹೋ..ಗರ್ದಿಶ್ ಮೇ ತಾರೆ ರಹೇಂಗೆ ಸದಾ...", (ನಾಳೆಯ ಆಟದಲ್ಲಿ ನಾವು ಇರಬಹುದು ಇಲ್ದೇ ಇರಬಹುದು, ಆದರೇ ಈ ಸಾಲಿನಲ್ಲಿ ನಾನು ಸದಾ ತಾರೆಯಾಗಿರುವೆ) ಹಾಡು ಹಾಡುವ ಮೂಲಕ ಸೇವೆಗೆ ವಿದಾಯ ಹೇಳಿದರು.
ಇದಕ್ಕೂ ಮೊದಲು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮಾತನಾಡಿ "ನ್ಯಾಯಮೂರ್ತಿ ಶಾ ಅವರೊಂದಿಗೆ ನ್ಯಾಯ ಪೀಠದಲ್ಲಿ ಕುಳಿತುಕೊಂಡಿರುವುದು ನಿಜವಾಗಿಯೂ ಸಂತೋಷದ ವಿಚಾರವಾಗಿದೆ. ನಾವು ಕ್ರಿಮಿನಲ್ ಪ್ರಕರಣ, ಜಿಎಸ್‌ಟಿಯಲ್ಲಿನ ಹೊಸ ಕಾನೂನು ಬಗ್ಗೆ ಒಟ್ಟಿಗೆ ಕಾರ್ಯ ನಿರ್ವಹಿಸಿದ್ದೇವೆ. ಮತ್ತು ಇಂತಹ ಸವಾಲುಗಳಿಗೆ ಶಾ ಅವರು ಸದಾ ಸಿದ್ದರಿರುತ್ತಿದ್ದರು ಎಂದರು.
ಇದರಿಂದ ಭಾವುಕರಾದ ಶಾ, ನಾನು ಅಳಲು ಪ್ರಾರಂಭಿಸಿದರೆ ದಯವಿಟ್ಟು ನನ್ನನ್ನು ಕ್ಷಮಿಸಿ. ನನ್ನ ಬಗ್ಗೆ ತಾವೆಲ್ಲರೂ ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ಭಾವನೆಗಳಿಗೆ ಧನ್ಯವಾದಗಳು ಎಂದರು. ಮುಂದುವರಿದು ಮಾತನಾಡಿದ ಅವರು, ನಾನು ನಿವೃತ್ತಿ ಹೊಂದುವ ವ್ಯಕ್ತಿಯಲ್ಲ, ಬದಲಿಗೆ ನಾನು ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದೇನೆ. ಅದಕ್ಕಾಗಿ ಒಳ್ಳೆಯ ಆರೋಗ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು. ಈ ವೇಳೆ ಮೇರಾ ನಾಮ್ ಜೋಕರ್ ಚಿತ್ರದ ಕೆಲವು ಸಾಲುಗಳನ್ನು ಹಾಡಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಾತನಾಡಿ, ನಾನು ಶಾ ಅವರನ್ನು ವಕೀಲರಾಗಿಯೂ ನೋಡಿದ್ದೇನೆ, ನ್ಯಾಯಮೂರ್ತಿಗಳಾಗಿಯೂ ನೋಡಿದ್ದೇನೆ. ಅವರು ತುಂಬ ಶ್ರಮಜೀವಿ ಮತ್ತು ಕೆಚ್ಚೆದೆಯ ಮನುಷ್ಯ ಎಂದು ಗುಣಗಾನ ಮಾಡಿದರು.
ನ್ಯಾಯಮೂರ್ತಿ ಎಂ.ಆರ್. ಶಾ ಅವರು ಮೇ 16, 1958 ರಂದು ಜನಿಸಿದರು. ಅವರು ಜುಲೈ 19, 1982 ರಂದು ವಕೀಲರಾಗಿ ನೇಮಕಗೊಂಡ ಅವರು, ಗುಜರಾತ್ ಹೈಕೋರ್ಟ್‌ನಲ್ಲಿ ಸಿವಿಲ್, ಕ್ರಿಮಿನಲ್, ಸಾಂವಿಧಾನಿಕ, ತೆರಿಗೆ, ಕಾರ್ಮಿಕ, ಸೇವೆ ಮತ್ತು ಕಂಪನಿ ವಿಷಯಗಳಲ್ಲಿ ಅಭ್ಯಾಸ ಮಾಡಿದರು. ಸಾಂವಿಧಾನಿಕ, ಶಿಕ್ಷಣ, ಅಬಕಾರಿ, ಕಸ್ಟಮ್ ವಿಷಯಗಳಲ್ಲಿ ಪರಿಣತಿ ಪಡೆದುಕೊಂಡಿದ್ದರು.
ನಂತರ ಮಾರ್ಚ್ 7, 2004 ರಂದು ಗುಜರಾತ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು ಜೂನ್ 22, 2005 ರಂದು ಖಾಯಂ ನ್ಯಾಯಾಧೀಶರಾಗಿ ಆಯ್ಕೆಯಾದರು. ಆಗಸ್ಟ್ 12, 2018 ರಂದು ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ನವೆಂಬರ್ 2, 2018 ರಂದು ಭಾರತದ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಉನ್ನತೀಕರಿಸಲಾಯಿತು.
ಇದನ್ನೂ ಓದಿ: ಬಜರಂಗದಳ ಅವಹೇಳನ ಆರೋಪ: ಮಲ್ಲಿಕಾರ್ಜುನ್ ಖರ್ಗೆಗೆ ಪಂಜಾಬ್ ಕೋರ್ಟ್ ಸಮನ್ಸ್