ನವದೆಹಲಿ: ಪಕ್ಷಾಂತರ ನಿಷೇಧ ಕಾಯ್ದೆಯಡಿ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಅಜಿತ್ ಪವಾರ್ ಮತ್ತು ಇತರ ಏಳು ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಶರದ್ ಪವಾರ್ ಬಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ. ತ್ವರಿತ ನಿರ್ಧಾರ ಕೈಗೊಳ್ಳಲು ಸೂಚನೆಗಳನ್ನು ನೀಡುವಂತೆ ಆದೇಶಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠವು ಮುಂದಿನ ಶುಕ್ರವಾರ ಅರ್ಜಿಯನ್ನು ಶಿವಸೇನೆ ಪ್ರಕರಣದೊಂದಿಗೆ ಪಟ್ಟಿ ಮಾಡಲು ನಿರ್ಧರಿಸಿದೆ. ಇದರಲ್ಲಿ ನ್ಯಾಯಾಲಯವು ಅನರ್ಹತೆ ಪ್ರಕರಣಗಳ ಬಗ್ಗೆ ನಿರ್ಧರಿಸಲು ಮಹಾರಾಷ್ಟ್ರ ಸ್ಪೀಕರ್‌ಗೆ ಈ ಹಿಂದೆ ನಿರ್ದೇಶನಗಳನ್ನು ನೀಡಿತ್ತು.
ಎನ್‌ಸಿಪಿ ಪರವಾಗಿ ಅರ್ಜಿದಾರ ಜಯಂತ್ ಪಾಟೀಲ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಅಜಿತ್ ಪವಾರ್ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಸೆಪ್ಟೆಂಬರ್‌ನಲ್ಲಿಯೇ ಅನರ್ಹತೆ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದರು. ಈ ಹೇಳಿಕೆಯನ್ನು ನಿರಾಕರಿಸಿದ ಸಿಬಲ್, ಜುಲೈನಲ್ಲಿಯೇ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ಶಿವಸೇನೆ ಪ್ರಕರಣದ ಜೊತೆಗೆ ಪ್ರಕರಣವನ್ನು ಪಟ್ಟಿ ಮಾಡುವುದಾಗಿ ಸಿಜೆಐ ಹೇಳಿದಾಗ, ಎರಡು ಪ್ರಕರಣಗಳಲ್ಲಿನ ಸತ್ಯಗಳು ವಿಭಿನ್ನವಾಗಿವೆ ಎಂದು ರೋಹಟಗಿ ಹೇಳಿದರು. ಸೆಪ್ಟೆಂಬರ್ 18 ರಂದು ಶಿವಸೇನೆಯಿಂದ ಬಂಡೆದ್ದಿರುವ ಮಹಾರಾಷ್ಟ್ರದ ಈಗಿನ ಸಿಎಂ ಏಕನಾಥ್ ಶಿಂಧೆ ಮತ್ತು ಅವರ ಬಣದ 16 ಶಾಸಕರ ವಿರುದ್ಧದ ಅನರ್ಹತೆ ಅರ್ಜಿಯನ್ನು ಒಂದು ವಾರದೊಳಗೆ ಕೈಗೆತ್ತಿಕೊಂಡು ವಿಚಾರಣೆ ನಡೆಸಿ, ಎರಡು ವಾರದೊಳಗೆ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಸ್ಪೀಕರ್‌ಗೆ ಸೂಚಿಸಿತ್ತು.
ಶಿವಸೇನೆ ಬಂಡಾಯ ಶಾಸಕರ ಅನರ್ಹತೆ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಹೊತ್ತಿರುವ ಸಿಎಂ ಏಕನಾಥ್ ಶಿಂಧೆ ಮತ್ತವರ ಬಣದ ಕುರಿತ ವಿಚಾರಣೆಗೆ 4 ತಿಂಗಳ ಹಿಂದೆಯೇ ಆದೇಶಿಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಜುಲೈ 14 ರಂದು, ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಿವಸೇನೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ತ್ವರಿತ ನಿರ್ಧಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಶಿವಸೇನಾ (ಯುಬಿಟಿ) ಶಾಸಕ ಸುನೀಲ್ ಪ್ರಭು ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ಗೆ ನೋಟಿಸ್ ಜಾರಿ ಮಾಡಿತ್ತು.