ನವದೆಹಲಿ: ತನ್ನ ಜೊತೆಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದ ಅನ್ಯ ಸಮುದಾಯದ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ವಾದಿಯ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಜೋಡಿಯು ಅಂತರ್ ಧರ್ಮೀಯರಾಗಿದ್ದಕ್ಕೆ ರಕ್ಷಣೆ ಕೋರಿದ್ದನ್ನು ಪರಿಗಣಿಸಿ ಕೋರ್ಟ್ ಜಾಮೀನು ನೀಡಿದೆ.
ರಾಜಸ್ಥಾನದ ಅಜ್ಮೀರ್‌ನ ಜೋಡಿಯು ಲಿವ್ - ಇನ್-ರಿಲೇಶನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು ಮತ್ತು ಆಗಸ್ಟ್ 25, 2022 ರಂದು ಒಪ್ಪಂದದ ಮೂಲಕ ಅದನ್ನು ಔಪಚಾರಿಕಗೊಳಿಸಿದ್ದರು. ಅದೇ ತಿಂಗಳು ಅವರು ಸ್ಥಳೀಯ ತಮ್ಮ ವಿವಾಹ ನೋಂದಣಿಗಾಗಿ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಪ್ರಾಪ್ತೆ ಕುಟುಂಬವು ಜೋಡಿಯನ್ನು ಪತ್ತೆ ಹಚ್ಚಿದಾಗ ಹೆದರಿದ ಇಬ್ಬರೂ ಅಲ್ಲಿಂದ ತಪ್ಪಿಸಿಕೊಂಡು, ಪೊಲೀಸ್ ರಕ್ಷಣೆ ನೀಡಬೇಕು ಎಂದು ಕೋರಿದ್ದರು. ಜೋಡಿಯ ಮನವಿ ಮಾನ್ಯ ಮಾಡಿದ್ದ ರಾಜಸ್ಥಾನ ಹೈಕೋರ್ಟ್ ಜೋಡಿಗೆ ಪೊಲೀಸ್ ರಕ್ಷಣೆ ನೀಡಿತ್ತು.
ಏತನ್ಮಧ್ಯೆ ಹುಡುಗಿಯ ಮನೆಯವರು ಹೇಗೋ ಮಾಡಿ ಆಕೆಯ ಮನವೊಲಿಸಿ, ಆತನಿಂದ ದೂರವಾಗುವಂತೆ ಮತ್ತು ಆತನ ವಿರುದ್ಧ ಬಾಲಕಿ ಮೂಲಕ ದೂರು ದಾಖಲಿಸಿದ್ದರು. ಹುಡುಗಿಯ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಅತ್ಯಾಚಾರದ ಆರೋಪದ ಮೇಲೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 3/4 ರ ಅಡಿಯಲ್ಲಿ ಅಕ್ಟೋಬರ್ 31, 2022 ರಂದು ಆಕೆಯಿಂದ ದೂರವಾಗಿದ್ದ ಆರೋಪಿಯನ್ನು ಬಂಧಿಸಿದ್ದರು. ಆರೋಪಿಯ ವಿರುದ್ಧ ಚಾರ್ಜ್ಶೀಟ್ ದಾಖಲಾಗಿ ಆತ ಸುಮಾರು ಒಂಬತ್ತು ತಿಂಗಳ ಕಾಲ ಜೈಲಿನಲ್ಲಿದ್ದ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಜುಲೈ 5 ರಂದು ನೀಡಿದ ಆದೇಶದಲ್ಲಿ ಹೀಗೆ ಹೇಳಿದೆ: “ಮೂರು ಅಂಶಗಳು ನಮ್ಮ ಗಮನಕ್ಕೆ ಬಂದಿವೆ. ಆಗಸ್ಟ್ 25, 2022 ರ ಲಿವ್-ಇನ್-ರಿಲೇಶನ್‌ಶಿಪ್ ಒಪ್ಪಂದ, ವಿಶೇಷವಾಗಿ ಅಂತರ್‌ಧರ್ಮೀಯ ದಂಪತಿಗಳಾಗಿ ಪೊಲೀಸ್ ರಕ್ಷಣೆಗಾಗಿ ಜಂಟಿ ಅರ್ಜಿ ಸಲ್ಲಿಸಿದ್ದು ಮತ್ತು ಅರ್ಜಿದಾರ ಈಗಾಗಲೇ ಸುಮಾರು ಒಂಬತ್ತು ತಿಂಗಳ ಕಾಲ ಬಂಧನದಲ್ಲಿರುವುದು. ಅರ್ಜಿದಾರರಾದ ಇಮಾಮುದಿನ್ ಅವರನ್ನು ಪ್ರತಿನಿಧಿಸುವ ವಕೀಲ ನಮಿತ್ ಸಕ್ಸೇನಾ ಅವರು ನ್ಯಾಯಾಲಯದ ಮುಂದೆ ಇದು ಸುಳ್ಳು ಪ್ರಕರಣ ಮತ್ತು ತಮ್ಮ ಕಕ್ಷಿದಾರರು ಹುಡುಗಿಯೊಂದಿಗೆ ಒಮ್ಮತದ ಸಂಬಂಧ ಹೊಂದಿದ್ದಾರೆ ಎಂದು ವಾದಿಸಿದರು. ವ್ಯಕ್ತಿಯು ಹುಡುಗಿಯನ್ನು ಹೊಟೇಲ್ಗೆ ಕರೆದೊಯ್ದು ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದನೆಂದು ಹೇಳಲಾದ ಘಟನೆಯ ಬಗ್ಗೆ ಹೋಟೆಲ್‌ನಲ್ಲಿ ಯಾವುದೇ ಸಿಸಿಟಿವಿ ದೃಶ್ಯಾವಳಿಗಳು ಕಂಡುಬಂದಿಲ್ಲ ಎಂದು ಸಕ್ಸೇನಾ ವಾದಿಸಿದರು.
ವಾದಗಳನ್ನು ಆಲಿಸಿದ ನಂತರ, ಮೇಲಿನ ಸಂಗತಿಗಳು ಮತ್ತು ಸಂದರ್ಭಗಳ ದೃಷ್ಟಿಯಿಂದ, ವಿಚಾರಣಾ ನ್ಯಾಯಾಲಯದ ಷರತ್ತುಗಳನ್ನು ಪಾಲಿಸುವ ಷರತ್ತಿನೊಂದಿಗೆ ಜಾಮೀನು ನೀಡುತ್ತೇವೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ : ಅಗ್ನಿಸಾಕ್ಷಿಯಲ್ಲ, ChatGPT ಸಾಕ್ಷಿಯಾಗಿ ನಡೆಯಿತು ಮದುವೆ; ಇದು ಚಾಟ್ಬಾಟ್ ಪೌರೋಹಿತ್ಯದ ವಿವಾಹ!