ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಆನಂದ್ ತೇಲ್ತುಂಬ್ಡೆಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಎನ್‌ಐಎ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಅಲ್ಲದೇ, ದಲಿತ ಸಂಚಲನದ ಬಗ್ಗೆ ತೇಲ್ತುಂಬ್ಡೆ ಉಪನ್ಯಾಸ ನೀಡುತ್ತಿದ್ದರು. ಇದು ಭಯೋತ್ಪಾದನೆಯೇ? ಎಂದು ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿಯಾ ಅವರನ್ನು ಪೀಠವು ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ಪೀಠ ಬಾಂಬೆ ಹೈಕೋರ್ಟ್‌ನ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಆದಾಗ್ಯೂ, ವಿಚಾರಣೆಯ ವೇಳೆಯಲ್ಲಿ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಪ್ರಾಮುಖ್ಯತೆ ಪಡೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ತೇಲ್ತುಂಬ್ಡೆ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಪೀಠದ ಮುಂದೆ ವಾದ ಮಂಡಿಸಿ, ಹೈಕೋರ್ಟ್ ಈಗಾಗಲೇ ಈ ವಿಷಯವನ್ನು ವ್ಯವಹರಿಸಿದೆ ಮತ್ತು ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದೆ ಎಂದಿದ್ದಾರೆ.
ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ತನ್ನ ಕಕ್ಷಿದಾರ ಇರಲಿಲ್ಲ ಮತ್ತು ಅವರು ಅಲ್ಲಿದ್ದರು ಎಂದು ತೋರಿಸಲು ಎನ್‌ಐಎ ಯಾವುದೇ ಸಾಕ್ಷ್ಯವನ್ನು ತೋರಿಸಿಲ್ಲ ಎಂದು ಹೇಳಿದ ಸಿಬಲ್, ಕಕ್ಷಿದಾರನನ್ನು ಭಯೋತ್ಪಾದಕ ಚಟುವಟಿಕೆಯೊಂದಿಗೆ ಸಂಪರ್ಕಿಸಲು ಯಾವುದೇ ದಾಖಲೆಗಳಿಲ್ಲ ಎಂದು ಹೈಕೋರ್ಟ್ ಹೇಳುತ್ತದೆ ಎಂದು ಹೇಳಿದರು.
ಕಾಯ್ದೆಯ ಸೆಕ್ಷನ್ 38 ಮತ್ತು 39ರ ಅಡಿ ಅಪರಾಧಗಳನ್ನು ಮಾತ್ರ ತೇಲ್ತುಂಬೆ ಅವರ ವಿರುದ್ದ ಮಾಡಲಾಗಿದೆ. ಈ ಕೃತ್ಯಕ್ಕೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಇದ್ದು ಈಗಾಗಲೇ 2 ವರ್ಷಗಳಿಗಿಂತ ಹೆಚ್ಚು ಕಾಲ ಜೈಲು ವಾಸ ಅನುಭವಿಸಿದ್ದಾರೆ. ಈ ಹಿನ್ನೆಲೆ ₹1 ಲಕ್ಷ ಭದ್ರತೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿರುವುದಾಗಿ ಹೈಕೋರ್ಟ್ ಹೇಳಿತ್ತು.
ಓದಿ: ಭೀಮಾ ಕೋರೆಗಾಂವ್ ಪ್ರಕರಣ: 5 ಪಕ್ಷದ ಅಧ್ಯಕ್ಷರಿಗೆ ಸಮನ್ಸ್; ಜೂನ್ 30ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಸೂಚನೆ