ನವದೆಹಲಿ: ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಮೇಲ್ವಿಚಾರಣೆ ನಡೆಸಲು ಪ್ರತ್ಯೇಕ ಪೀಠ ರಚನೆ ಹಾಗೂ ಸ್ವಯಂಪ್ರೇರಿತ (ಸುಮೋಟೋ) ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ಎಲ್ಲ ದೇಶದ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ನಿರ್ದೇಶನ ನೀಡಿದೆ. ಶಾಸಕರ ವಿರುದ್ಧ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಏಕರೂಪದ ಮಾರ್ಗಸೂಚಿಗಳನ್ನು ಹೊರಡಿಸುವುದು ಕಷ್ಟ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿತು.
ಜನಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಹೈಕೋರ್ಟ್‌ಗಳು ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ನಿರ್ದೇಶನ ನೀಡಬೇಕು ಹಾಗೂ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರಡಿ ಹಾಲಿ ಶಾಸಕರು ಸೇರಿದಂತೆ ಅಪರಾಧಿ ರಾಜಕಾರಣಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಪ್ರಸ್ತುತ ಇರುವ ಆರು ವರ್ಷಗಳ ನಿಷೇಧವನ್ನು ಆಜೀವ ಅವಧಿಗೆ ಪರಿವರ್ತಿಸಬೇಕೆಂದು ಕೋರಿ ವಕೀಲ ಅಶ್ವಿನಿ ಉಪಾಧ್ಯಾಯ ಸೇರಿದಂತೆ ಇತರರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿತು. ರಾಜಕೀಯದ ಅಪರಾಧೀಕರಣವನ್ನು ತಡೆಯಲು ಪ್ರತಿ ಹೈಕೋರ್ಟ್‌ಗಳಲ್ಲಿ ರಚಿಸಲಾಗುವ ವಿಶೇಷ ಪೀಠವು ನಿರಂತರ ನಿರ್ದೇಶನಗಳನ್ನು ನೀಡುತ್ತದೆ. ಇದರ ನೇತೃತ್ವವನ್ನು ಮುಖ್ಯ ನ್ಯಾಯಮೂರ್ತಿಗಳು ಅಥವಾ ಮುಖ್ಯ ನ್ಯಾಯಾಧೀಶರು ಗೊತ್ತುಪಡಿಸಿದ ಪೀಠ ವಹಿಸಲಿದೆ. ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಮತ್ತು ಇತರ ಅಧಿಕಾರಿಗಳ ನೆರವು ಪಡೆಯಬಹುದು. ಹೈಕೋರ್ಟ್ ತನ್ನ ವ್ಯಾಪ್ತಿಯಲ್ಲಿರುವ ಎಲ್ಲ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯಗಳಿಂದ ಈ ವಿಷಯದ ಸ್ಥಿತಿಗತಿ ವರದಿಗಳನ್ನೂ ಸಹ ಸಂಗ್ರಹಿಸಬಹುದು ಎಂದು ತಿಳಿಸಿತು.
ಇದೇ ವೇಳೆ, ಅಪರೂಪದ ಮತ್ತು ಬಲವಾದ ಕಾರಣಗಳನ್ನು ಹೊರತುಪಡಿಸಿ ವಿಚಾರಣಾಧೀನ ನ್ಯಾಯಾಲಯಗಳು ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ವಿರುದ್ಧದ ಪ್ರಕರಣಗಳ ವಿಚಾರಣೆ ಮಂದೂಡಬಾರದು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಶಾಸಕರ ವಿಚಾರಣೆಗೆ ಒಳಪಡಿಸುವ ಗೊತ್ತುಪಡಿಸಿದ ವಿಶೇಷ ನ್ಯಾಯಾಲಯಗಳಿಗೆ ಸಾಕಷ್ಟು ಮೂಲಸೌಕರ್ಯ, ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕೆಂದು ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.
ಶಿಕ್ಷೆಗೆ ಗುರಿಯಾಗುವ ಜನಪ್ರತಿನಿಧಿಗಳಿಗೆ ಆಜೀವ ನಿಷೇಧ ಹೇರಬೇಕೆಂಬ ಮನವಿ ಬಗ್ಗೆ ನ್ಯಾಯಪೀಠವು ಇಂದು ಯಾವುದೇ ನಿರ್ಧಾರವನ್ನು ಪ್ರಕಟಿಸಲಿಲ್ಲ. ಕೇವಲ ತ್ವರಿತ ವಿಲೇವಾರಿಗಾಗಿ ಕೆಳ ಹಂತದ ನ್ಯಾಯಾಲಯಗಳಿಗೆ ನಿರ್ದೇಶನ ಕೊಟ್ಟಿದೆ. ಆಜೀವ ನಿಷೇಧದ ವಿಷಯವನ್ನು ಮುಂದಿನ ವಿಚಾರಣೆ ವೇಳೆ ಪರಿಗಣಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೈದಿ ಪತಿಯಿಂದ ಮಗು ಪಡೆಯಲು ಬಯಸಿದ ಪತ್ನಿ; ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ