ನವದೆಹಲಿ: ತನ್ನ ಆದೇಶಗಳ ಹೊರತಾಗಿಯೂ ಕಳೆದ ವರ್ಷ ಇದ್ದಂತೆಯೇ 2022 ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಯಲ್ಲಿ ಮಹಿಳಾ ಅಭ್ಯರ್ಥಿಗಳ ಪ್ರವೇಶವನ್ನು 19ಕ್ಕೆ ನಿರ್ಬಂಧಿಸಿರುವುದು ಯಾಕೆ ಎಂಬುದರ ವಿವರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
2021ರಲ್ಲಿ ಮಹಿಳೆಯರು ಸೇರಿದಂತೆ ಒಟ್ಟು ಎನ್‌ಡಿಎ ಪರೀಕ್ಷೆ ತೆಗೆದುಕೊಂಡವರು, ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು (RIMC) ಪ್ರವೇಶ ಪರೀಕ್ಷೆ ಪಡೆದಿದ್ದವರು ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆ (RMS) ಪ್ರವೇಶ ಪರೀಕ್ಷೆಗಳಲ್ಲಿ ಭಾಗವಹಿಸಿದ ಮಹಿಳೆಯರು ಸೇರಿದಂತೆ ಒಟ್ಟು ಅಭ್ಯರ್ಥಿಗಳ ಅಂಕಿ-ಅಂಶಗಳನ್ನು ನೀಡುವಂತೆ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಅವರಿದ್ದ ದ್ವಿಸದಸ್ಯ ಪೀಠವು ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರನ್ನು ಪ್ರಶ್ನಿಸಿದ್ದು, ಯುಪಿಎಸ್‌ಸಿ ಹೊರಡಿಸಿದ ಅಧಿಸೂಚನೆಯ ಪ್ರಕಾರ 2022 ನೇ ಸಾಲಿಗೆ ಮಹಿಳೆಯರ ಸಂಖ್ಯೆಯನ್ನು 19ಕ್ಕೆ ಏಕೆ ನಿಗದಿಪಡಿಸಲಾಗಿದೆ ಎಂಬುದನ್ನು ಸರ್ಕಾರ ವಿವರಿಸಬೇಕು ಎಂದು ಹೇಳಿದ್ದಾರೆ.
ಅಂಕಿ-ಅಂಶಗಳು 2021 ರ ಪರೀಕ್ಷೆಯಂತೆಯೇ ಇದೆ. ಕಳೆದ ವರ್ಷ ಮೂಲಸೌಕರ್ಯ ಸಮಸ್ಯೆಯಿಂದ ಮಹಿಳೆಯರ ಸೇವೆ ಕಡಿಮೆಯಾಗಿದೆ ಎಂದು ಹೇಳಿದ್ದೀರಿ. ಈಗ ಮತ್ತೆ 2022ಕ್ಕೆ ಅದೇ ಸಂಖ್ಯೆಯ ಮಹಿಳಾ ಅಭ್ಯರ್ಥಿಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದೀರಿ. ನೀವು ಈ ಅಂಕಿ ಅಂಶವನ್ನು ಏಕೆ ಸರಿಪಡಿಸಿಲ್ಲ? ಈ ಬಗ್ಗೆ ವಿವರಿಸಬೇಕು. 19 ಸ್ಥಾನಗಳು ಎಲ್ಲಾ ಕಾಲಕ್ಕೂ ಬರಲು ಸಾಧ್ಯವಿಲ್ಲ. ಇದು ತಾತ್ಕಾಲಿಕ ಕ್ರಮವಷ್ಟೇ ಎಂದು ಸುಪ್ರೀಂ ಪೀಠ ಹೇಳಿದೆ.
ಅಫಿಡವಿಟ್ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಮೂರು ವಾರಗಳ ಕಾಲಾವಕಾಶ ನೀಡಿದ್ದು, ಎರಡು ವಾರಗಳಲ್ಲಿ ಮರು ಪ್ರತಿಕ್ರಿಯೆ ಸಲ್ಲಿಸುವಂತೆ ಕಕ್ಷಿದಾರರಿಗೆ ಹೇಳಿದೆ. ಮಾರ್ಚ್ 6 ರಂದು ಮುಂದಿನ ವಿಚಾರಣೆಗೆ ಅರ್ಜಿ ವಿಚಾರಣೆಯನ್ನು ಪಟ್ಟಿ ಮಾಡಿದೆ.
'ಅರ್ಹತೆ ಪಡೆದವರು 8,009 ಅಭ್ಯರ್ಥಿಗಳು'
ವಿಚಾರಣೆಯ ಆರಂಭದಲ್ಲಿ ಅರ್ಜಿದಾರ ಕುಶ್ ಕಲ್ರಾ ಪರ ಹಾಜರಾದ ಹಿರಿಯ ವಕೀಲ ಚಿನ್ಮೊಯ್ ಪ್ರದೀಪ್ ಶರ್ಮಾ, 2021ರ ನವೆಂಬರ್ 14 ರಂದು ಎನ್‌ಡಿಎ ಪರೀಕ್ಷೆ ನಡೆಸಲಾಗಿದೆ. 8,009 ಅಭ್ಯರ್ಥಿಗಳು ಸೇವಾ ಆಯ್ಕೆ ಮಂಡಳಿ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಅರ್ಹತೆ ಪಡೆದಿದ್ದಾರೆ ಎಂದು ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದಾರೆ. ಅದರಲ್ಲಿ 1,002 ಅಭ್ಯರ್ಥಿಗಳು ಮಹಿಳೆಯರು ಹಾಗೂ 7,007 ಪುರುಷರು ಇದ್ದಾರೆ.
ಯುಪಿಎಸ್‌ಸಿ ಮತ್ತು ಸರ್ಕಾರ ನೀಡಿದ ಜಾಹೀರಾತಿನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ರಸ್ತುತ ಎನ್‌ಡಿಎ-II 2021 ಪ್ರವೇಶದಲ್ಲಿ ಎನ್‌ಡಿಎ 400 ಕೆಡೆಟ್‌ಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಈ ಪೈಕಿ 10 ಮಹಿಳೆಯರು ಸೇರಿದಂತೆ 208 ಅಭ್ಯರ್ಥಿಗಳು ಸೇನೆಗೆ ತೆರಳಲಿದ್ದಾರೆ. ನೌಕಾಪಡೆಗೆ ಮೂವರು ಮಹಿಳೆಯರು ಸೇರಿದಂತೆ 42 ಅಭ್ಯರ್ಥಿಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಆದರೆ ಐಎಎಫ್ ತೆಗೆದುಕೊಂಡ 120 ಅಭ್ಯರ್ಥಿಗಳ ಪೈಕಿ ಕೇವಲ 6 ಮಹಿಳೆಯರು ಇದ್ದಾರೆ. ಹೀಗಾಗಿ, 2022ರ ಜೂನ್ ವೇಳೆಗೆ ಎನ್‌ಡಿಎಗೆ ಸೇರ್ಪಡೆಗೊಳ್ಳುವ ಒಟ್ಟು ಮಹಿಳೆಯರ ಸಂಖ್ಯೆ 19 ಎಂದು ಶರ್ಮಾ ಕೋರ್ಟ್‌ಗೆ ಹೇಳಿದ್ದಾರೆ.
ಇದನ್ನೂ ಓದಿ: ಕೇರಳ, ತಮಿಳುನಾಡು, ಪಶ್ಚಿಮಬಂಗಾಳ ಸ್ತಬ್ಧಚಿತ್ರ ಮರುಪರಿಶೀಲನೆ ಇಲ್ಲ: ರಕ್ಷಣಾ ಸಚಿವಾಲಯ