ನವದೆಹಲಿ: ಅತ್ಯಾಚಾರ ಸಂತ್ರಸ್ತೆಯನ್ನು ಪರೀಕ್ಷಿಸುವ ಎರಡು ಬೆರಳಿನ ಪರೀಕ್ಷೆ (two-finger test) ಪದ್ಧತಿ ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವುದು ದುರದೃಷ್ಟಕರ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ ಮತ್ತು ಇಂಥ ಪರೀಕ್ಷೆಗಳು ನಡೆಯದಂತೆ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳಿಗೆ ಸೂಚಿಸಿದೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ ಜಾರ್ಖಂಡ್ ಹೈಕೋರ್ಟ್‌ನ ತೀರ್ಪನ್ನು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ರದ್ದುಗೊಳಿಸಿತು ಮತ್ತು ಆತನನ್ನು ಅಪರಾಧಿ ಎಂದು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಎರಡು ಬೆರಳಿನ ಪರೀಕ್ಷೆಯ ಬಗ್ಗೆ ನಿರ್ದೇಶನಗಳನ್ನು ನೀಡಿದೆ.
ದಶಕದ ಹಿಂದೆಯೇ ಎರಡು ಬೆರಳಿನ ಪರೀಕ್ಷೆಯು ಮಹಿಳೆಯ ಘನತೆ ಮತ್ತು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದಾಗ್ಯೂ ಈ ಅಭ್ಯಾಸ ಇಂದಿಗೂ ಪ್ರಚಲಿತದಲ್ಲಿರುವುದು ದುರದೃಷ್ಟಕರ ಸಂಗತಿ. ಯೋನಿ ಸಡಿಲತೆಯನ್ನು ಪರೀಕ್ಷಿಸುವ ವಿಧಾನವು ಮಹಿಳೆಯರ ಘನತೆಗೆ ಕುಂದು ತರುವಂಥದು. ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯ ಮೇಲೆ ಅತ್ಯಾಚಾರ ಮಾಡಲಾಗದು ಎಂದು ಹೇಳಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿತು.
ಎರಡು ಬೆರಳು ಪರೀಕ್ಷೆ ನಡೆಸದಂತೆ ನೋಡಿಕೊಳ್ಳಲು ರಾಜ್ಯಗಳ ಡಿಜಿಪಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ. ಎರಡು ಬೆರಳು ಪರೀಕ್ಷೆಯನ್ನು ನಡೆಸುವ ಯಾವುದೇ ವ್ಯಕ್ತಿಯನ್ನು ದುರ್ನಡತೆಯ ಅಪರಾಧಿ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಪಠ್ಯಕ್ರಮದಿಂದ ಎರಡು ಬೆರಳಿನ ಪರೀಕ್ಷೆಯ ಅಧ್ಯಯನ ಪಾಠಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯದ ಆರೋಗ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್: ಕೋರ್ಟ್ನಲ್ಲಿ ಸಂತ್ರಸ್ತ ಬಾಲಕಿಯರಿಂದ ಹೇಳಿಕೆ ದಾಖಲು