ಕೇರಳ: ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಮಾದವೊಂದು ಜರುಗಿದೆ. ಯಾತ್ರೆ ಹೊರಡುವ ಮಾರ್ಗದಲ್ಲಿ ಕಾಂಗ್ರೆಸ್ ಹಾಕಲಾದ ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರ್ನಲ್ಲಿ ವೀರ ಸಾವರ್ಕರ್ ಅವರ ಪೋಟೋವನ್ನು ಅಳವಡಿಸಲಾಗಿದೆ. ಇದು ಗಮನಿಸದೇ ಕಾರ್ಯಕರ್ತರು ಬ್ಯಾನರ್ ಅಂಟಿಸಿದ್ದಾರೆ.
ವಿಷಯ ಹೊರಬಿದ್ದ ಬಳಿಕ ಕಾರ್ಯಕರ್ತರು ದಿಢೀರನೇ ಸಾವರ್ಕರ್ ಫೋಟೋಗೆ ಮರೆಯಾಗಿ ಗಾಂಧಿ ಚಿತ್ರವುಳ್ಳ ಬ್ಯಾನರ್ ಅನ್ನು ಮುಚ್ಚಿದ್ದಾರೆ. ಕಾಂಗ್ರೆಸ್‌ನ ಸ್ವಯಂಕೃತ ಅಚಾತುರ್ಯವನ್ನು ಬಿಜೆಪಿ ಗೇಲಿ ಮಾಡಿದೆ. ಕೊನೆಗೂ ಅವರನ್ನು ಒಪ್ಪಿಕೊಂಡಿರಲ್ಲ ಎಂದಿದೆ.
ಏನಾಯ್ತು: ಕೇರಳದಲ್ಲಿ 14 ದಿನದಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಎರ್ನಾಕುಲಂ ಜಿಲ್ಲೆ ತಲುಪಿದೆ. ಯಾತ್ರೆಯನ್ನು ಸ್ವಾಗತಿಸಲು ಕಾರ್ಯಕರ್ತರು ಭರದ ಸಿದ್ಧತೆ ನಡೆಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳುಳ್ಳ ಬ್ಯಾನರ್ಗಳನ್ನು ಸಾಲಾಗಿ ಅಂಟಿಸಿದ್ದಾರೆ. ಅನಿರೀಕ್ಷಿತವಾಗಿ ವಿ.ಡಿ. ಸಾವರ್ಕರ್ ಇರುವ ಫೋಟೋ ಕೂಡ ಬ್ಯಾನರ್ನಲ್ಲಿದೆ.
ಇದನ್ನು ಎಲ್ಡಿಎಫ್ ಬೆಂಬಲಿತ ಕೇರಳದ ಸ್ವತಂತ್ರ ಶಾಸಕ ಪಿ.ವಿ. ಅನ್ವರ್ ಗಮನಿಸಿ, ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಸಾವರ್ಕರ್ ಇದ್ದಾರೆ ಎಂದು ಬರೆದಿದ್ದಾರೆ.
ತಪ್ಪಾಗಿ ಮುದ್ರಣ- ಕಾಂಗ್ರೆಸ್ ಸ್ಪಷ್ಟನೆ: ಮುದ್ರಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳುಳ್ಳ ಬ್ಯಾನರ್ ಸಿದ್ಧ ಮಾಡಲು ಸೂಚಿಸಲಾಗಿತ್ತು. ಇಂಟರ್ನೆಟ್ನಲ್ಲಿ ಸಿಕ್ಕ ಹೋರಾಟಗಾರರ ಚಿತ್ರಗಳನ್ನು ಅವರು ಅಳವಡಿಸಿದ್ದಾರೆ. ಸಾವರ್ಕರ್ ಫೋಟೋವನ್ನು ತಪ್ಪಾಗಿ ಮುದ್ರಿಸಿದ್ದಾರೆ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ಸಾವರ್ಕರ್ ಮರೆಮಾಡಿದ ಗಾಂಧಿ: ಇನ್ನು ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮಹಾತ್ಮಾ ಗಾಂಧಿ ಅವರ ಫೋಟೋವನ್ನು ಸಾವರ್ಕರ್ ಫೋಟೋಗೆ ಮರೆ ಮಾಡಿ ಅಳವಡಿಸಿದರು.
ತಡವಾದರೂ ಒಳ್ಳೆಯದೇ- ಬಿಜೆಪಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ತಡವಾಗಿಯಾದರೂ ಸರಿ, ಸಾವರ್ಕರ್ ಅವರನ್ನು ಒಪ್ಪಿಕೊಂಡಿರಲ್ಲ. ಇದು ಉತ್ತಮ ಬೆಳವಣಿಗೆ ಎಂದು ಬಿಜೆಪಿ ಹೇಳಿದೆ.
ತಡವಾಗಿಯಾದರೂ ರಾಹುಲ್ ಗಾಂಧಿಯವರಿಗೆ ಒಳ್ಳೆಯ ಬುದ್ಧಿ ಬಂದಿದೆ. ಅವರ ಮುತ್ತಜ್ಜ ನೆಹರು ಅವರು ಕೂಡ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಕೇವಲ 2 ವಾರದಲ್ಲಿ ಪಂಜಾಬ್‌ನ ನಭಾ ಜೈಲಿನಿಂದ ಆಚೆ ಬರಲು ಹವಣಿಸಿ ಕ್ಷಮೆ ಕೋರಿ ಅರ್ಜಿ ಹಾಕಿದ್ದರು" ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.
"ಇತಿಹಾಸವನ್ನು ಮರೆಮಾಚಲು ಎಷ್ಟೇ ಪ್ರಯತ್ನಿಸಿದರೂ, ಸತ್ಯ ಹೊರಬರಲೇಬೇಕು. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಎಂಬುದನ್ನು ಅಲ್ಲಗಳೆಯಲಾಗದು" ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
ಓದಿ: ಪಿಎಂ ಕೇರ್ಸ್ ಫಂಡ್ಗೆ ರತನ್ ಟಾಟಾ ಟ್ರಸ್ಟಿ, ಸಲಹೆಗಾರರಾಗಿ ಸುಧಾಮೂರ್ತಿ ನೇಮಕ