ತೆಂಕಸಿ(ತಮಿಳುನಾಡು): ಬಟ್ಟೆ ಮಳಿಗೆಯ ಪ್ರಚಾರಕ್ಕಾಗಿ 50 ರೂಪಾಯಿಗೊಂದು ಸೀರೆ ಅಂತ ಆಫರ್ ನೀಡಿದ್ದ ವ್ಯಾಪಾರಿಯೊಬ್ಬ 5 ಮಹಿಳೆಯರನ್ನು ಸೇರಿ ಕೋವಿಡ್ ನಿಯಮ ಉಲ್ಲಂಘಿಸಿದ ಪರಿಣಾಮ 10 ಸಾವಿರ ರೂ. ದಂಡ ಕಟ್ಟಿರುವ ಘಟನೆ ತಮಿಳುನಾಡಿನ ತೆಂಕಸಿಯಲ್ಲಿ ನಡೆದಿದೆ.
ವೈಯಕ್ತಿಕ ಅಂತರಕ್ಕೆ ಎಳ್ಳುನೀರು ಬಿಟ್ಟ ಜನ
50 ರೂಪಾಯಿಯ ಸೀರೆ ಕೊಳ್ಳಲು 5 ಸಾವಿರ ಮಂದಿ ಸ್ಥಳದಲ್ಲಿ ಸೇರಿದ ಪರಿಣಾಮ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಮಯಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಪೊಲೀಸರು ಮಳಿಗೆ ಮಾಲೀಕನಿಗೆ ದಂಡ ವಿಧಿಸಿದ್ದಾರೆ. ಮೂಲಗಳ ಪ್ರಕಾರ ನಗರದ ತಾಲೂಕು ಕಚೇರಿ ಎದುರು ಹಾಗೂ ಪೊಲೀಸ್ ಠಾಣೆಯಿಂದ ಕೇವಲ 800 ಮೀಟರ್ ದೂರದಲ್ಲಿರುವ ಈ ಮಳಿಗೆಯಲ್ಲಿ ಮೊದಲ 3,000 ಗ್ರಾಹಕರಿಗೆ 50 ರೂ.ಗೆ ಸೀರೆಗಳನ್ನು ನೀಡುವ ಕೊಡುಗೆ ಘೋಷಣೆ ಮಾಡಲಾಗಿದೆ.
ವಿಪರ್ಯಾಸವೆಂದರೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಮಹಿಳೆಯರ ವಿರುದ್ಧದ ಅಪರಾಧ) ರಾಜೇಂದ್ರನ್, ತೆಂಕಸಿ ಕಾಂಗ್ರೆಸ್ ಶಾಸಕ ಪಳನಿ ನಾಡಾರ್ ಹಾಗೂ ತಮಿಳುನಾಡು ವಣಿಗರ್ ಸಂಗಂಕಾಲಿನ್ ಪೆರಮೈಪ್ಪು ಅಧ್ಯಕ್ಷ ವಿಕ್ರಮರಾಜ ಅವರು ಮಳಿಗೆ ಉದ್ಘಾಟಿಸಿದ್ದಾರೆ. ತಿರುನೆಲ್ವೇಲಿ-ತೆಂಕಸಿ ಹೆದ್ದಾರಿಯಲ್ಲಿ ಅಂಗಡಿಯ ಉದ್ಘಾಟನೆಗೆ ಒಂದು ದಿನ ಮೊದಲೇ 50 ರೂಪಾಯಿ ಸೀರೆಯ ಆಫರ್ ನೀಡಲಾಗಿತ್ತು.
ಬೆಳಗ್ಗೆಯೇ ಕ್ಯೂ ಹಚ್ಚಿದ್ದ ಮಹಿಳೆಯರು
ಆಲಂಗುಳಂ ಹಾಗೂ ಸುತ್ತಮುತ್ತಲಿನ ಹಳ್ಳಿಗಳ 5,000 ಕ್ಕೂ ಹೆಚ್ಚು ಮಹಿಳೆಯರು ಬೆಳಗ್ಗೆಯೇ ಅಂಗಡಿಗೆ ಬಂದಿದ್ದಾರೆ. ಇವರಲ್ಲಿ ಯಾರೂ ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರವನ್ನು ಪಾಲಿಸಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಘಟನೆಯ ನಂತರ, ಆರೋಗ್ಯ ಅಧಿಕಾರಿಗಳು ಮಾಲೀಕರಿಗೆ 10,000 ರೂ ದಂಡ ವಿಧಿಸಿದ್ದಾರೆ. ಹೀಗಾಗಿ ನಾವು ಅಂಗಡಿಗೆ ಸೀಲ್ ಮಾಡಿಲ್ಲ ಎಂದು ಆಲಂಗುಳಂ ತಹಶೀಲ್ದಾರ್ ಪರಿಮಳ ಹೇಳಿದ್ದಾರೆ. ಆಲಂಗುಳಂ ಪೊಲೀಸರು ಜವಳಿ ಅಂಗಡಿಯ ಮಾಲೀಕರು ಮತ್ತು ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಕೃಷ್ಣರಾಜ್ ತಿಳಿಸಿದ್ದಾರೆ.