ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದ ಆವರಣದಲ್ಲಿ ಅಭಿವೃದ್ಧಿಪಡಿಸಲಾದ ಮಹಾಕಾಲ ಲೋಕ ಕಾರಿಡಾರ್‌ನಲ್ಲಿ ಸ್ಥಾಪಿಸಲಾಗಿದ್ದ 7 ಸಪ್ತಋಷಿಗಳ ಪ್ರತಿಮೆಗಳ ಪೈಕಿ 6 ಬಿರುಗಾಳಿಯಿಂದ ಉರುಳಿಬಿದ್ದು ಹಾನಿಗೊಳಗಾಗಿವೆ. ಈ ಬೆಳವಣಿಗೆ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.
"ಬಿಜೆಪಿಯವರು ಭ್ರಷ್ಟಾಚಾರದಲ್ಲಿ ದೇವರನ್ನೂ ಬಿಡುವುದಿಲ್ಲ. ಮಹಾಕಾಲ ಲೋಕ ಕಾರಿಡಾರ್‌ನಲ್ಲಿ ನಡೆದ ಈ ಘಟನೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ" ಎಂದು ಕಾಂಗ್ರೆಸ್ ಆರೋಪಿಸಿದೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಮಹಾಕಾಲ ಲೋಕ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಭ್ರಷ್ಟಾಚಾರ ಮಾಡಿದೆ. ಈ ಬಗ್ಗೆ ತನಿಖೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
"ಮಹಾಕಾಲ ಲೋಕ ಕಾರಿಡಾರ್‌ನಲ್ಲಿ ಒಟ್ಟು 160 ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಸುಮಾರು 10 ಅಡಿ ಎತ್ತರದ 6 ಸಪ್ತಋಷಿಗಳ ವಿಗ್ರಹಗಳು ಗಾಳಿಯ ರಭಸಕ್ಕೆ ಉರುಳಿಬಿದ್ದಿವೆ" ಎಂದು ಉಜ್ಜಯಿನಿ ಜಿಲ್ಲಾಧಿಕಾರಿ ಕುಮಾರ್ ಪುರಷೋತ್ತಮ್ ಹೇಳಿದರು.
ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ನಡೆದ ಈ ಘಟನೆಯಲ್ಲಿ ಯಾವೊಬ್ಬರಿಗೂ ಯಾವುದೇ ಹಾನಿಯಾಗಿಲ್ಲ. ಘಟನೆಯ ನಂತರ ಮಹಾಕಾಲ ಲೋಕ ಕಾರಿಡಾರ್ ಅನ್ನು ಕೆಲವು ಗಂಟೆಗಳ ಕಾಲ ಮುಚ್ಚಲಾಗಿತ್ತು. ಇತ್ತ ನಗರದ ಬೇರೆಡೆ ಮಳೆಗೆ ಇಬ್ಬರು ಮೃತ ಪಟ್ಟು, ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್, "ವಿಗ್ರಹಗಳನ್ನು ಕೂಡಲೇ ಜೀರ್ಣೋದ್ಧಾರ ಮಾಡುವಂತೆ ನಾನು ಮುಖ್ಯಮಂತ್ರಿಗಳನ್ನು ಕೋರುತ್ತೇನೆ. ಕಳಪೆ ಗುಣಮಟ್ಟದ ನಿರ್ಮಾಣದ ಬಗ್ಗೆ ತನಿಖೆ ನಡೆಸಬೇಕು ಮತ್ತು ಅದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಶಿಕ್ಷಿಸಬೇಕು" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಚೌಹಾಣ್ ಉಜ್ಜಯಿನಿ ಜಿಲ್ಲಾಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಎರಡು ಪ್ರತಿಮೆಗಳು ನೆಲಕ್ಕೆ ಬಿದ್ದ ಪರಿಣಾಮ ಸಂಪೂರ್ಣವಾಗಿ ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ. ನೆಲಕ್ಕೆ ಬಿದ್ದ ಸಪ್ತರ್ಷಿಗಳ ಎಲ್ಲ ಆರು ಪ್ರತಿಮೆಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು. ಆದರೆ ಕಾಂಗ್ರೆಸ್ ಈ ಅಹಿತಕರ ಘಟನೆ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.
ಭಾನುವಾರದ ಮುನ್ಸೂಚನೆಯಂತೆ ಉಜ್ಜಯಿನಿಯ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 40 ರಿಂದ 50 ಕಿ. ಮೀ ವೇಗದಲ್ಲಿ ಗಾಳಿ ಬೀಸಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಭೋಪಾಲ್ ಕೇಂದ್ರದ ಕರ್ತವ್ಯ ಅಧಿಕಾರಿ ಜೆ.ಪಿ ವಿಶ್ವಕರ್ಮ ತಿಳಿಸಿದ್ದಾರೆ. ಉಜ್ಜಯಿನಿಯಲ್ಲಿ ಗಾಳಿಯ ವೇಗವನ್ನು ಅಳೆಯಲು ಸ್ವಯಂಚಾಲಿತ ಹವಾಮಾನ ಕೇಂದ್ರವನ್ನು ಹೊಂದಿಲ್ಲ. ನಾವು ಅದಕ್ಕೆ ಬೇಡಿಕೆ ಸಲ್ಲಿಸಲಿದ್ದೇವೆ ಎಂದು ಅವರು ತಿಳಿಸಿದರು.
ದೇಶದಲ್ಲೇ ಅತಿ ಉದ್ದದ ಕಾರಿಡಾರ್: ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಳೇಶ್ವರ ದೇವಸ್ಥಾನದ ಸುತ್ತಲಿನ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಪುನರುಜ್ಜೀವನಗೊಂಡಿರುವ ಹಳೆಯ ರುದ್ರಸಾಗರ ಸರೋವರವನ್ನು ದೇಶದಲ್ಲೇ ಅತಿ ಉದ್ದದ ಕಾರಿಡಾರ್ ಎಂದು ಹೇಳಲಾಗುತ್ತದೆ. 900 ಮೀಟರ್‌ಗಿಂತಲೂ ಹೆಚ್ಚು ಉದ್ದವನ್ನು ಹೊಂದಿರುವ ಈ ಕಾರಿಡಾರ್‌ನಲ್ಲಿ ಆನಂದ್ ತಾಂಡವ್ ಸ್ವರೂಪ (ಶಿವನ ನೃತ್ಯದ ಒಂದು ರೂಪ), ಶಿವ ಮತ್ತು ಶಕ್ತಿ ದೇವತೆಯ 200 ಪ್ರತಿಮೆಗಳು ಮತ್ತು ಭಿತ್ತಿಚಿತ್ರಗಳನ್ನು ಚಿತ್ರಿಸುವ ಸಂಕೀರ್ಣವಾದ ಕೆತ್ತಿದ ಮರಳುಗಲ್ಲುಗಳಿಂದ ಮಾಡಲ್ಪಟ್ಟ ಸುಮಾರು 108 ಕಲಾತ್ಮಕವಾಗಿ ಅಲಂಕೃತವಾದ ಕಂಬಗಳನ್ನು ಹೊಂದಿದೆ.
ಗುಜರಾತಿನ ಕಂಪನಿಗಳು ವಿಗ್ರಹಗಳನ್ನು ರಚಿಸುವ ಮತ್ತು ಕಾರಿಡಾರ್ ನಿರ್ಮಿಸುವ ಕೆಲಸದಲ್ಲಿ ತೊಡಗಿವೆ ಎಂದು ಅಧಿಕಾರಿ ಹೇಳಿದರು. ಮಹಾಕಾಲ ಲೋಕ ಯೋಜನೆಯ ಒಟ್ಟು (ಎರಡು ಹಂತದ ಯೋಜನೆ) ವೆಚ್ಚ 856 ಕೋಟಿ ರೂ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾಕಾಲ ಲೋಕ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದ್ದರು. ಯೋಜನೆಯ 2ನೇ ಹಂತ 2024 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ಮಧ್ಯಪ್ರದೇಶ ತಿಳಿಸಿದೆ.
ಇದನ್ನೂ ಓದಿ: ಉಜ್ಜಯಿನಿಯಲ್ಲಿ ಮಹಾಕಾಲ ಕಾರಿಡಾರ್ ಉದ್ಘಾಟಿಸಿದ ಪ್ರಧಾನಿ ಮೋದಿ