ಭಾರತ ದೇಶದಲ್ಲಿ ಸುಮಾರು ಆರು ಲಕ್ಷದ ಅರವತ್ತು ಸಾವಿರಕ್ಕೂ ಹೆಚ್ಚು ಹಳ್ಳಿಗಳಿವೆ. ಅವುಗಳಲ್ಲಿ ಕೆಲವು ವಿಶೇಷತೆಯನ್ನು ಹೊಂದಿವೆ. ಈ ಗ್ರಾಮಗಳ ಕತೆಗಳು ತುಂಬಾ ಕುತೂಹಲಕಾರಿಯಾಗಿವೆ. ಇಂಥ ಕುತೂಹಲಕರವಾದ ಹಾಗೂ ವಿಶೇಷವಾದ ಕೆಲ ಹಳ್ಳಿಗಳ ಬಗ್ಗೆ ತಿಳಿಯೋಣ ಬನ್ನಿ..
ಈ ಹಳ್ಳಿಯ ಭಾಷೆ ಸಂಸ್ಕೃತ: ಸಂಸ್ಕೃತವನ್ನು ದೇವರ ಭಾಷೆ ಎಂದು ಕರೆಯುವುತ್ತಾರೆ. ಆದರೆ ದೇಶದಲ್ಲಿ ಎಷ್ಟು ಜನ ಸಂಸ್ಕೃತ ಮಾತನಾಡಬಲ್ಲರು? ಶಾಲೆಯಲ್ಲಿ ಅಂಕಗಳಿಗಾಗಿ ಅಧ್ಯಯನ ಮಾಡುವುದು ಅಥವಾ ವೇದ ಮಂತ್ರ ಹೇಳುವುದನ್ನು ಹೊರತುಪಡಿಸಿದರೆ ಕೆಲವೇ ಕೆಲವರು ತಮ್ಮ ಗೆಳೆಯರೊಂದಿಗೆ ಸಂಪೂರ್ಣವಾಗಿ ಸಂಸ್ಕೃತದಲ್ಲಿ ಮಾತನಾಡಬಲ್ಲರು. ಆದರೆ, ಅಸ್ಸೋಂನ ಕರಿಂಗಂಜ್ ಜಿಲ್ಲೆಯ ಪಟಿಯಾಲ ಗ್ರಾಮವನ್ನು ನೋಡಿದರೆ ಈ ಅಭಿಪ್ರಾಯ ತಪ್ಪಾಗಿದೆ ಎನಿಸುತ್ತದೆ.
ಈ ಹಳ್ಳಿಯ ಜನರೆಲ್ಲರೂ ಸಂಸ್ಕೃತವನ್ನು ಮಾತ್ರ ಮಾತನಾಡುತ್ತಾರೆ. ದೈನಂದಿನ ವ್ಯವಹಾರಗಳಿಗೆ ಅದೇ ಭಾಷೆಯನ್ನು ಬಳಸಲಾಗುತ್ತದೆ. ಮೊದಲಿನಿಂದಲೂ ಇವರು ಸಂಸ್ಕೃತ ಮಾತನಾಡುತ್ತಿರಲಿಲ್ಲ. 2015ರಲ್ಲಿ ಗ್ರಾಮಕ್ಕೆ ತೆರಳಿದ ‘ಸಂಸ್ಕೃತ ಭಾರತಿ’ ಕಾರ್ಯಕರ್ತರು ಸಂಸ್ಕೃತ ಶಿಬಿರ ಆಯೋಜಿಸಿದ್ದರು. ಅವರಿಂದ ಸಂಸ್ಕೃತ ಕಲಿತ ಹಳ್ಳಿಗರು ಅಂದಿನಿಂದ ಸಂಸ್ಕೃತದಲ್ಲಿ ಮಾತನಾಡತೊಡಗಿದರು. ಇಲ್ಲಿನ ಜನ ತಮ್ಮ ಮಕ್ಕಳಿಗೂ ಸಂಸ್ಕೃತ ಕಲಿಸುತ್ತಿದ್ದಾರೆ. ಗ್ರಾಮದಲ್ಲಿ ಪ್ರತಿದಿನ ಬೆಳಗ್ಗೆ 5 ರಿಂದ 7 ಗಂಟೆಯವರೆಗೆ ಯೋಗ ಶಿಬಿರ ಆಯೋಜಿಸಲಾಗುತ್ತದೆ. ಕೃಷಿ ಕೆಲಸದಲ್ಲಿ ಬಿಡುವಿಲ್ಲದಿದ್ದರೂ ಗ್ರಾಮಸ್ಥರು ಪ್ರತಿದಿನ ಯೋಗಾಭ್ಯಾಸ ಮಾಡುತ್ತಾರೆ. ಇವರನ್ನು ನೋಡಿ ಹತ್ತಿರದ ಅನಿಪುರಬಸ್ತಿ ಗ್ರಾಮದವರು ಸಹ ಸಂಸ್ಕೃತ ಕಲಿತು ಮಾತನಾಡುತ್ತಿದ್ದಾರೆ.
ಭಾರತದಲ್ಲೊಂದು ಪುಟ್ಟ ಆಫ್ರಿಕಾ: ದೇಶದ ದೊಡ್ಡ ಮೆಟ್ರೋ ನಗರಗಳಲ್ಲಿ ಆಫ್ರಿಕನ್ನರು ಆಗಾಗ ಕಾಣಿಸಿಕೊಳ್ಳುತ್ತಾರೆ. ಓದಲು ಬಂದವರು, ಉದ್ಯೋಗಕ್ಕಾಗಿ ಇಲ್ಲಿಯೇ ಉಳಿದುಕೊಂಡಿರುವವರು ಹೀಗೆ ಅನೇಕ ಆಫ್ರಿಕನ್ನರು ದೇಶದಲ್ಲಿದ್ದಾರೆ. ಆದರೆ, ಶುದ್ಧ ಗುಜರಾತಿ ಮಾತನಾಡುವ ಆಫ್ರಿಕನ್ನರನ್ನು ನೀವು ಎಂದಾದರೂ ನೋಡಿದ್ದೀರಾ? ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನವನದ ಬಳಿಯಿರುವ ಜಂಬೂರಿಗೆ ಹೋದರೆ ನೀವು ಅವರನ್ನು ನೋಡಬಹುದು.
ಜಂಬೂರ್ ಇದು ಭಾರತದ ಮಿನಿ ಆಫ್ರಿಕನ್ ಗ್ರಾಮ ಎಂದರೂ ತಪ್ಪಾಗಲಾರದು. ಇವರು ಕೆಲ ಶತಮಾನಗಳ ಹಿಂದೆ ಆಗ್ನೇಯ ಆಫ್ರಿಕಾದಿಂದ ನಮ್ಮ ದೇಶಕ್ಕೆ ಬಂದ ಬಂಟು ಬುಡಕಟ್ಟಿನ ವಂಶಸ್ಥರಾಗಿದ್ದಾರೆ. ಆ ಸಮಯದಲ್ಲಿ, ಅವರ ಪೂರ್ವಜರು ಗುಲಾಮರಾಗಿ ಮತ್ತು ನಾವಿಕರಾಗಿ ಕೆಲಸ ಮಾಡಲು ಇಲ್ಲಿಗೆ ಬಂದಿದ್ದರು. ಅರಬ್ ವ್ಯಾಪಾರಿಗಳು ಅವರಲ್ಲಿ ಕೆಲವರನ್ನು ಭಾರತೀಯ ನವಾಬರಿಗೆ ಹಸ್ತಾಂತರಿಸಿದರು. ಇತರರನ್ನು ಪೋರ್ಚುಗೀಸರು ಕರೆತಂದರು. ಈ ಆಫ್ರಿಕನ್ನರನ್ನು ಸಿದ್ಧಿಗಳು ಎಂದು ಕರೆಯಲಾಗುತ್ತದೆ. ಇಲ್ಲೇ ವಾಸಿಸಲಾರಂಭಿಸಿದ ಇವರು ಇತ್ತೀಚಿನ ದಶಕಗಳಲ್ಲಿ ತಮ್ಮ ಮಾತೃಭಾಷೆ ಕೂಡ ಮರೆತಿದ್ದಾರೆ. ಗುಜರಾತಿ ಭಾಷೆಯನ್ನೇ ಮಾತನಾಡುವ ಇವರು ಸ್ಥಳೀಯ ಸಂಪ್ರದಾಯಗಳಿಗೆ ಒಗ್ಗಿಕೊಂಡಿದ್ದಾರೆ. ಬಹುತೇಕ ಜಂಬೂರು ಸಿದ್ಧಿಗಳು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರವಾಸಿಗರಿಗೆ ಬುಡಕಟ್ಟು ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಇವರು ಆದಾಯ ಗಳಿಸುತ್ತಾರೆ.
ಕುಸ್ತಿಪಟುಗಳ ಹಳ್ಳಿ: ದೇಶದ ರಾಜಧಾನಿ ದೆಹಲಿಯ ಹೊರವಲಯದಲ್ಲಿರುವ ಆ ಹಳ್ಳಿಗೆ ಹೋದರೆ ಕುಸ್ತಿಯನ್ನು ಇಷ್ಟಪಡುವ ಬಲಿಷ್ಠ ದೇಹದಾರ್ಢ್ಯದ ಕುಸ್ತಿಪಟುಗಳೇ ನಿಮಗಿಲ್ಲಿ ಕಾಣಿಸುತ್ತಾರೆ. ಈ ಗ್ರಾಮದ ಹೆಸರು ಹೆಸರು ಅಸೋಲಾ-ಫತೇಪುರ್ ಪಿಯರ್. ಈ ಕುಸ್ತಿಪಟುಗಳು ಹೆಚ್ಚಾಗಿ ನೈಟ್‌ಕ್ಲಬ್‌ಗಳು, ಬಾರ್‌ಗಳು ಮತ್ತು ಇತರ ಪ್ರದೇಶಗಳಲ್ಲಿ ಬೌನ್ಸರ್‌ಗಳಾಗಿ ಕೆಲಸ ಮಾಡುತ್ತಾರೆ. ಬೆಳಗ್ಗೆ ಮತ್ತು ಸಂಜೆ ಇಲ್ಲಿನ ಯುವಕರು ಸಾಂಪ್ರದಾಯಿಕ ವಿಧಾನಗಳಲ್ಲಿ ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ. ಕುಸ್ತಿ ಕಲಿಯುತ್ತಾರೆ ಮತ್ತು ಆ ಸ್ಪರ್ಧೆಗಳಲ್ಲಿ ಕೂಡ ಭಾಗವಹಿಸುತ್ತಾರೆ.
20 ವರ್ಷಗಳ ಹಿಂದೆ ಗ್ರಾಮದ ವಿಜಯ್ ತನ್ವಾರ್ ಸಾಕಷ್ಟು ಪರಿಶ್ರಮ ಪಟ್ಟರೂ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಭಾರತದ ಕುಸ್ತಿ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಕೆಲಸ ಅರಸಿ ಬೌನ್ಸರ್ ಆಗಿ ಸೇರಿಕೊಂಡರು. ಇವರ ನಂತರ ಹಳ್ಳಿಯ ಅನೇಕ ಯುವಕರು ಅದೇ ದಾರಿ ಹಿಡಿದರು. ಧೂಮಪಾನ ಮತ್ತು ಮದ್ಯಪಾನದಂತಹ ಕೆಟ್ಟ ಚಟಗಳಿಂದ ದೂರವಿದ್ದು, ಪೌಷ್ಟಿಕಾಂಶ ಆಹಾರ ಸೇವಿಸುವ ಮೂಲಕ ಕಟ್ಟುಮಸ್ತಾದ ಮೈಕಟ್ಟು ಹೊಂದಿದ್ದಾರೆ.
ಇದನ್ನೂ ಓದಿ: ಹಳೆಯ ಜೀವನ ಪದ್ಧತಿಯ ತಾಣ 'ಕೂರ್ಮ'... ಇದು ಆಧುನಿಕ ತಂತ್ರಜ್ಞಾನದ ಸೌಲಭ್ಯ ಬಳಸದ ಗ್ರಾಮ