ಮುಂಬೈ (ಮಹಾರಾಷ್ಟ್ರ) : ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ ಪ್ರಕರಣವು ಇದೀಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುಟುಂಬಕ್ಕೆ ತಳುಕು ಹಾಕಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖಂಡ ಸಂಜಯ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುಟುಂಬ ಮತ್ತು ಆತ್ಮಹತ್ಯೆ ಮಾಡಿಕೊಂಡ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಕುಟುಂಬದ ನಡುವೆ ಅಕ್ರಮ ಭೂ ವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವುದಕ್ಕೆ ಮುಂಬೈನಲ್ಲಿ ರಾವತ್ ಹೀಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ವಿನಾ ಕಾರಣ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುಟುಂಬ ಮೇಲೆ ಆರೋಪ ಹೊರಿಸಲಾಗುತ್ತಿದೆ. ಇದು ಸತ್ಯಕ್ಕೆ ಸಮೀಪವಲ್ಲದ ಆರೋಪ. ಅನ್ವಯ್ ನಾಯಕ್ ಅವರ ಕುಟುಂಬಕ್ಕೂ ಹಾಗೂ ಉದ್ಧವ್ ಠಾಕ್ರೆ ಕುಟುಂಬಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಅಲ್ಲದೇ ಇವರ ನಡುವೆ ಯಾವುದೇ ರೀತಿಯ ವ್ಯವಹಾರ ನಡೆದಿಲ್ಲ. ಬಿಜೆಪಿ ಮುಖಂಡರ ಸುಳ್ಳು ಆರೋಪಗಳಿಗೆ ಬೆಲೆ ಕೊಡಬೇಕಿಲ್ಲ ಎಂದು ಈ ಬಗ್ಗೆ ಆರೋಪ ಮಾಡಿದ್ದ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಮುಖಂಡರು ಓರ್ವ ಆರೋಪಿಯನ್ನು ರಕ್ಷಿಸಲು ಈ ಎಲ್ಲ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಗಳಿಗೆ ಬೆಲೆ ತೆರಬೇಕಾಗುತ್ತದೆ ಎಂದು ಸಂಜಯ್ ರಾವತ್, ಬಿಜೆಪಿ ಮುಖಂಡರನ್ನು ಕೇವಲ ಐದು ವರ್ಷಗಳ ಕಾಲ ಅಷ್ಟೇ ಅಲ್ಲ 25 ವರ್ಷಗಳ ಕಾಲ ಮನೆಯಲ್ಲಿ ಕುಳಿತುಕೊಳ್ಳುವಂತೆ ನಾವು ಮಾಡಿ ತೋರಿಸುತ್ತೇವೆ ಎಂದು ವಾಗ್ದಾನ ಮಾಡಿದರು.
ಠಾಕ್ರೆ ಅವರ ಪತ್ನಿ ರಶ್ಮಿ ಮತ್ತು ಸೇನಾ ನಾಯಕ ರವೀಂದ್ರ ವೈಕರ್ ಅವರ ಪತ್ನಿ ಮನೀಷಾ ಅವರು ಒಳಾಂಗಣ ವಿನ್ಯಾಸಕ ಅನ್ವಯ್ ನಾಯಕ್ ಜಂಟಿಯಾಗಿ ಜಮೀನು ಖರೀದಿಸಿದ್ದಾರೆ ಎಂಬುದು ಸೇರಿದಂತೆ ಬಿಜೆಪಿ ಮುಖಂಡ ಸೋಮಯ್ಯ ಎರಡೂ ಕುಟುಂಬದ ನಡುವಿನ ವ್ಯವಹಾರ ಕುರಿತು ಹತ್ತಾರು ಪ್ರಶ್ನೆಗಳನ್ನು ಎತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಒಂದು ದಿನದ ನಂತರ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ.