ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎನ್ಸಿಪಿ ಹಾಗೂ ಶಿವಸೇನೆಯ ಪ್ರಮುಖ ಮುಖಂಡರ ಜೊತೆ ಮಹತ್ವದ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ದೀದಿ, ಯುಪಿಎ ಎಂಬುದು ಈಗ ಉಳಿದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ಗೆ ಟಾಂಗ್ ನೀಡಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಹಾಗೂ ಸಂಜಯ್ ರಾವತ್ ಭೇಟಿ ಮಾಡ್ತಿರುವುದು ಕುತೂಹಲ ಮೂಡಿಸಿದೆ.
ಮಹಾರಾಷ್ಟ್ರದಲ್ಲಿ ಈಗಾಗಲೇ ಎನ್ಸಿಪಿ+ಕಾಂಗ್ರೆಸ್+ಶಿವಸೇನೆ ಮೈತ್ರಿ ಸರ್ಕಾರವಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ಸಂಸದ ಸಂಜಯ್ ರಾವತ್ ಹಾಗೂ ರಾಹುಲ್ ಗಾಂಧಿ ನಡುವೆ ಮಹತ್ವದ ಮಾತುಕತೆ ನಡೆಯಲಿದೆ. ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಬಗ್ಗೆ ಇಂದಿನ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಯುಪಿಎ ವಿಚಾರವಾಗಿ ಮಾತುಕತೆ ನಡೆಯಬಹುದು ಎನ್ನಲಾಗ್ತಿದೆ.
ಇದನ್ನೂ ಓದಿರಿ: 104 ವರ್ಷದ ಪದ್ಮಶ್ರೀ ಪುರಸ್ಕೃತ ನಂದಾ ಸರ್ ಇನ್ನಿಲ್ಲ...
ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿರುವ ಕಾರಣ ಅನೇಕ ಸಂದರ್ಭಗಳಲ್ಲಿ ಸಂಜಯ್ ರಾವತ್ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ಹೇಳಿಕೆ ನಂತರ ಈ ಭೇಟಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ.
ಮುಂದಿನ ವರ್ಷದ ಆರಂಭದಲ್ಲೇ ಗೋವಾ, ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎನ್ಸಿಪಿ ಹಾಗೂ ಶಿವಸೇನೆಯ ಬೆಂಬಲ ಪಡೆದುಕೊಳ್ಳಲು ರಾಹುಲ್ ಗಾಂಧಿ ಮನವಿ ಮಾಡಿಕೊಳ್ಳಬಹುದು.