ರೇವಾ (ಮಧ್ಯಪ್ರದೇಶ): ತ್ಯಾಗದ ಸಂಕೇತವಾದ ಬಕ್ರೀದ್ ಅನ್ನು ಗುರುವಾರ ಅಂದರೆ, ಜೂನ್ 29ರಂದು ದೇಶಾದ್ಯಂತ ಆಚರಿಸಲಾಗಿತ್ತು. ಇದಕ್ಕೂ ಒಂದು ದಿನ ಮೊದಲು, ಇಬ್ಬರು ರೇವಾ ನಗರದಲ್ಲಿ ಮೇಕೆಯ ಮೇಲೆ ತಮ್ಮ ಮಾಲೀಕತ್ವದ ಹಕ್ಕು ಸ್ಥಾಪಿಸಲು ಮುಂದಾಗಿದ್ದಾರೆ. ಮೇಕೆ ವಿವಾದ ಬಗೆಹರಿಯದಿದ್ದಾಗ ಎರಡೂ ಕಡೆಯವರಿಂದ ಸಿವಿಲ್ ಲೈನ್ ಠಾಣೆಗೆ ಬಂದು ಪರಸ್ಪರ ದೂರು ದಾಖಲಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು, ಮೇಕೆಯನ್ನು ಠಾಣೆಯ ಹೊರಗೆ ಕಟ್ಟಿಹಾಕಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಎರಡೂ ಕಡೆಯಿಂದ ಮೇಕೆಯ ಭಾವಚಿತ್ರ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಕೆ ಮಾಡಲು ಕೇಳಿದ್ದಾರೆ. ಆದರೆ, ಈವರೆಗೂ ಮೇಕೆಯ ನಿಜವಾದ ಮಾಲೀಕ ಪತ್ತೆಯಾಗದ ಕಾರಣ ಇದೀಗ ಈ ಮೇಕೆ ಪೊಲೀಸರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಮೇಕೆಯ ನಿಜವಾದ ಮಾಲೀಕರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೇಕೆ ಮೇಲೆ ಮಾಲೀಕತ್ವ ವ್ಯಕ್ತಪಡಿಸಿದ ಇಬ್ಬರು: ಪದ್ಮಾಧರ್ ಕಾಲೋನಿ ನಿವಾಸಿ ಸಂಜಯ್ ಖಾನ್ ಅವರು ಸಿವಿಲ್ ಲೈನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. 7ರಿಂದ 8 ತಿಂಗಳ ಹಿಂದೆ ಮನೆಯ ಹೊರಗಿನಿಂದ ಮೇಕೆ ಕಳವಾಗಿತ್ತು ಎಂದು ಸಂಜಯ್ ಖಾನ್ ಹೇಳಿದ್ದಾರೆ. ಮೇಕೆ ಕಳ್ಳತನವಾದ ಬಳಿಕ ಸಾಕಷ್ಟು ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆ, ಸಂಜಯ್ ಖಾನ್ ತನ್ನ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾಗ, ಘೋಘರ್ ಪ್ರದೇಶದ ಮನೆಯೊಂದರ ಹೊರಗೆ ತನ್ನ ಮೇಕೆ ಕಟ್ಟಿಹಾಕಿರುವುದು ಕಂಡುಬಂದಿದೆ. ಹತ್ತಿರ ಹೋದಾಗ ಸಂಜಯ್ ಖಾನ್ಗೆ ಅದು ತನ್ನ ಮೇಕೆ ಎಂದು ಮನವರಿಕೆಯಾಯಿತು. ಸಂಜಯ್ ಖಾನ್ ಈ ಮೇಕೆ ತನ್ನ ಮನೆಯಲ್ಲಿ ಹುಟ್ಟಿದ್ದು, ಅದರ ಫೋಟೋಗಳು ಸಹ ತನ್ನ ಬಳಿ ಇವೆ ಎಂದು ಹೇಳಿಕೊಂಡಿದ್ದಾರೆ.
ಮತ್ತೊಂದೆಡೆ, ಮೇಕೆ ಮಾಲೀಕತ್ವವನ್ನು ಪ್ರತಿಪಾದಿಸುತ್ತಿರುವ ಘೋಘರ್ ನಿವಾಸಿ ಶಾರುಖ್ ಖಾನ್, ಒಂದು ವರ್ಷದ ಹಿಂದೆ ತನ್ನ ಸ್ನೇಹಿತರೊಂದಿಗೆ ಸುತ್ತಾಡಲು ಹೋಗುತ್ತಿದ್ದಾಗ ದಾರಿಯಲ್ಲಿ ಮೇಕೆಗಳ ಹಿಂಡನ್ನು ನೋಡಿದೆ. ಈ ಮೇಕೆಯ ಫೋಟೋವನ್ನು ಕುಟುಂಬ ಸದಸ್ಯರಿಗೆ ಕಳುಹಿಸಿದ್ದರು. ಆಗ ಮೇಕೆಯನ್ನು ಇಷ್ಟಪಟ್ಟು 15 ಸಾವಿರಕ್ಕೆ ಖರೀದಿಸಿದ್ದಾರೆ. ಒಂದು ವೇಳೆ, ಮೇಕೆ ಕದ್ದಿದ್ದರೆ ಫೇಸ್ಬುಕ್ ಹಾಗೂ ಇತರ ಸಾಮಾಜಿಕ ತಾಣಗಳಲ್ಲಿ ತನ್ನ ಮೇಕೆಯ ಚಿತ್ರವನ್ನು ಶೇರ್ ಮಾಡುತ್ತಿರಲಿಲ್ಲ ಎನ್ನುತ್ತಾರೆ ಶಾರುಖ್. ಸಂಜಯ್ ಖಾನ್ ಪೊಲೀಸರಿಗೆ ತೋರಿಸಿದ ಮೇಕೆಯ ಫೋಟೋವನ್ನು ಆತನ ಮನೆಯ ಸಮೀಪದಿಂದ ತೆಗೆಯಲಾಗಿದೆ.
ಪೊಲೀಸರಿಗೆ ತಲೆನೋವಾದ ಮೇಕೆ: ಇನ್ನೊಂದೆಡೆ ಮೇಕೆ ವಿವಾದ ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಮೇಕೆ ವಿವಾದದ ಕುರಿತು ಸಿವಿಲ್ ಲೈನ್ ಠಾಣಾ ಪ್ರಭಾರಿ ಹಿತೇಂದ್ರನಾಥ್ ಶರ್ಮಾ ಮಾತನಾಡಿ, ''ಸಂಜಯ್ ಖಾನ್ ಪೊಲೀಸ್ ಠಾಣೆಗೆ ದೂರು ನೀಡಿ ಅರ್ಜಿ ಸಲ್ಲಿಸಿದ್ದು, 7 ತಿಂಗಳ ಹಿಂದೆ ತನ್ನ ಮೇಕೆಯನ್ನು ಕಳ್ಳತನ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಮೇಕೆಯನ್ನು ಠಾಣೆಗೆ ಕರೆತರಲಾಗಿದ್ದು, ಇದರೊಂದಿಗೆ ಎರಡೂ ಕಡೆಯವರನ್ನೂ ಠಾಣೆಗೆ ಕರೆಸಲಾಗಿದ್ದು, ಮೇಕೆಗೆ ಸಂಬಂಧಿಸಿದಂತೆ ದಾಖಲೆಗಳು ಮತ್ತು ಸಾಕ್ಷ್ಯಗಳಿದ್ದರೆ ಠಾಣೆಗೆ ತಂದು ಹಾಜರುಪಡಿಸಬೇಕು. ಯಾವ ದಾಖಲೆಗಳು ಸತ್ಯವಾಗಿರುತ್ತವೋ ಅವರಿಗೆ ಈ ಮೇಕೆಯನ್ನು ಒಪ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿದ ತ್ರಿವಳಿ ತಲಾಖ್ ಹೋರಾಟಗಾರ್ತಿ ನಿದಾ ಖಾನ್..