ರಾಂಪುರ (ಉತ್ತರ ಪ್ರದೇಶ): ಸನಾತನ ಧರ್ಮ ಕುರಿತ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಯು ದೇಶಾದ್ಯಂತ ಚರ್ಚೆ ಹುಟ್ಟುಹಾಕಿದ್ದು, ವಿವಾದ ಸೃಷ್ಟಿಸಿದೆ. ಇದರ ನಡುವೆ ಉದಯನಿಧಿ ಸ್ಟಾಲಿನ್ ಮತ್ತು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಉತ್ತರ ಪ್ರದೇಶದ ರಾಂಪುರದಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಮನುಷ್ಯರಂತೆ ನಡೆಸಿಕೊಳ್ಳದ ಧರ್ಮವು ಕಾಯಿಲೆಯಷ್ಟೇ ಮಾರಕ- ಖರ್ಗೆ: ಪ್ರತಿ ಧರ್ಮಕ್ಕೂ ಪ್ರತ್ಯೇಕ ಭಾವನೆಗಳಿವೆ ಎಂದ ಮಮತಾ
ತಮಿಳುನಾಡು ಮುಖ್ಯಮಂತ್ರಿ ಪುತ್ರರಾದ ಸಚಿವ ಉದಯನಿಧಿ ಶನಿವಾರ ಸನಾತನ ಧರ್ಮ ಡೆಂಗ್ಯೂ ಮತ್ತು ಮಲೇರಿಯಾ ಇದ್ದಂತೆ. ಅದನ್ನು ಕೇವಲ ವಿರೋಧ ಮಾಡಬಾರದು. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಸನಾತನ ಧರ್ಮದ ಕುರಿತು ಈ ಹೇಳಿಕೆಯಿಂದ ಉದಯನಿಧಿ ಸ್ಟಾಲಿನ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ರಾಷ್ಟ್ರದಾದ್ಯಂತ ಭಾರಿ ವಿವಾದವನ್ನು ಹುಟ್ಟುಹಾಕಿದ್ದು, ಹಲವು ಬಿಜೆಪಿ ನಾಯಕರು ಮತ್ತು ಹಿಂದೂ ಮುಖಂಡರು ಕಿಡಿಕಾರಿದ್ದಾರೆ.
ಮತ್ತೊಂದೆಡೆ, ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಅವರು ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಹೇಳಿಕೆ ಕುರಿತು ಸೋಮವಾರ ಪ್ರತಿಕ್ರಿಯಿಸಿ, ಸಮಾನತೆ ಉತ್ತೇಜಿಸದ ಅಥವಾ ನೀವು ಮಾನವರಾಗಿರುವ ಘನತೆಯನ್ನು ಖಚಿತಪಡಿಸಿಕೊಳ್ಳದ ಯಾವುದೇ ಧರ್ಮವು ಧರ್ಮವಲ್ಲ. ನನ್ನ ಪ್ರಕಾರ, ಸಮಾನ ಹಕ್ಕುಗಳನ್ನು ನೀಡದ ಅಥವಾ ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳದ ಯಾವುದೇ ಧರ್ಮವು ಕಾಯಿಲೆಯಷ್ಟೇ ಮಾರಕ ಎಂದು ಹೇಳಿದ್ದರು. ಈ ಹೇಳಿಕೆಗಳ ಕುರಿತು ವಕೀಲರೊಬ್ಬರ ದೂರಿನ ಮೇರೆಗೆ ಇಬ್ಬರು ನಾಯಕರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153A, 295ಎ ಅಡಿಯಲ್ಲಿ ರಾಂಪುರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಹೇಳಿಕೆ ಸಮರ್ಥಿಸಿಕೊಂಡ ಉದಯನಿಧಿ: ಸನಾತನ ಧರ್ಮ ಕುರಿತು ತಮ್ಮ ಹೇಳಿಕೆಯನ್ನು ಉದಯನಿಧಿ ಸ್ಟಾಲಿನ್ ಸಮರ್ಥಿಸಿಕೊಂಡಿದ್ದಾರೆ. ನಾನು ಹಿಂದೂ ಧರ್ಮ ವಿರೋಧ ಹೇಳಿಕೆ ಕೊಟ್ಟಿಲ್ಲ. ನಾನು ಸನಾತನ ಧರ್ಮದ ವಿರೋಧಿ. ಸನಾತನ ಧರ್ಮ ಜಾತಿ ತಾರತಮ್ಯ ಮಾಡುತ್ತದೆ. ಹೀಗಾಗಿ ನಾನು ಅದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು ಎಂದಿದ್ದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ, ಸನಾತನ ಧರ್ಮದಲ್ಲಿನ ಜಾತಿ ತಾರತಮ್ಯ ಬಗ್ಗೆ ಉದಾಹರಣೆ ನೀಡುತ್ತೀರಾ ಎಂಬ ಪ್ರಶ್ನೆಗೆ ಉದಯನಿಧಿ, ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ. ಇದೇ ಸನಾತನ ಧರ್ಮದ ಜಾತಿವಾದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಹೇಳಿದರು. ಜೊತೆಗೆ ತಮ್ಮ ಹೇಳಿಕೆಗೆ ಕ್ಷಮೆಯಾಚನೆ ಕುರಿತು ಎಂಬ ಪ್ರತಿಕ್ರಿಯಿಸಿಲು ಅವರು ನಿರಾಕರಿಸಿದ್ದಾರೆ.
ಇನ್ನೊಂದೆಡೆ, ಈ ಕುರಿತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ ಎಲ್ ಸಂತೋಷ್ ಟ್ವೀಟ್ ಮಾಡಿ, ಯಾರಿಗಾದರೂ ಹೊಟ್ಟೆಯಲ್ಲಿ ಸೋಂಕು ಇದ್ದರೆ, ನೀವು ತಲೆಯನ್ನೇ ಕತ್ತರಿಸುತ್ತೀರಾ..?? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಉದಯನಿಧಿ ಸ್ಟಾಲಿನ್ ಕ್ಷಮೆಯಾಚಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಅಲ್ಲದೇ, ಉದಯನಿಧಿ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಇಂತಹ ಕಾರ್ಯಸೂಚಿ ಬಗ್ಗೆಯೇ ಚರ್ಚಿಸಲಾಗಿದೆ ಎಂದು ದೂರಿದೆ. (ಎಎನ್ಐ)
ಇದನ್ನೂ ಓದಿ: 'ಎಲ್ಲಿ ಬೇಕಾದರೂ ಅದನ್ನೇ ಹೇಳುವೆ'.. ಸನಾತನ ಧರ್ಮ ವಿವಾದಿತ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ಉದಯನಿಧಿ ಸ್ಟಾಲಿನ್