ನವದೆಹಲಿ: ಇಂದು ಮುಂಜಾನೆ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಡಬೇಕಿದ್ದ ಏರ್ ಇಂಡಿಯಾ ಫ್ಲೈಟ್ AI-173, ನಿಗದಿತ ಸಮಯಕ್ಕೆ ಟೇಕ್-ಆಫ್ ಆಗುವ ಕೆಲವೇ ಗಂಟೆಗಳ ಮೊದಲು ತಾಂತ್ರಿಕ ಸಮಸ್ಯೆಗಳ ನಿಮಿತ್ತ ರದ್ದುಗೊಂಡಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ವಿಮಾನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಬೆಳಗ್ಗೆ 6 ಗಂಟಗೆ ಟೇಕ್ ಆಫ್ ಆಗಬೇಕಿತ್ತು.
ಆದರೆ, ಟೇಕ್ ಆಫ್ ಆಗುವ ಕೆಲವೇ ಗಂಟೆಗಳ ಮೊದಲು ಪ್ರಯಾಣಿಕರಿಗೆ ಏರ್ ಇಂಡಿಯಾ ವಿಮಾನ ರದ್ದುಗೊಳಿಸಿರುವ ಬಗ್ಗೆ ಸಂದೇಶ ರವಾನಿಸಿ, ಮಾಹಿತಿ ನೀಡಿದೆ. ಮಧ್ಯಾಹ್ನ ಸ್ಯಾನ್ ಫ್ರಾನ್ಸಿಸ್ಕೋಗೆ ಬೋಯಿಂಗ್ 777 ಪರ್ಯಾಯ ವಿಮಾನ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೂ ಎಲ್ಲಾ ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸಲಾಗಿದ್ದು, ಟಿಕೆಟ್ ರದ್ದು ಮಾಡಿದವರಿಗೆ ಪರಿಹಾರದ ಪ್ಯಾಕೇಜ್ ಜೊತೆಗೆ ಸಂಪೂರ್ಣ ಮರುಪಾವತಿಯನ್ನು ಪಡೆದು ಕೊಂಡಿದ್ದಾರೆ. ಮಧ್ಯಾಹ್ನದ ಪರ್ಯಾಯ ವಿಮಾನದಲ್ಲಿ ಹೊರಡಲಿರುವ ಪ್ರಯಾಣಿಕರಿಗೆ ಹೋಟೆಲ್ ವಾಸ್ತವ್ಯದ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಂದು ರದ್ದಾದ ವಿಮಾನ ಇದೇ ವರ್ಷ ಜೂನ್ನಲ್ಲಿ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದಾಗ ತಾಂತ್ರಿಕ ಸಮಸ್ಯೆಗೆ ಒಳಗಾಗಿತ್ತು. ವಿಮಾನದ ಎಂಜಿನ್ನಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯಿಂದಾಗಿ ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. 216 ಪ್ರಯಾಣಿಕರು ಹಾಗೂ 16 ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ವಿಮಾನ, ಹಾರಾಟದ ವೇಳೆ ಸಮಸ್ಯೆ ಎದುರಿಸಿತ್ತು. ವಿಮಾನದಲ್ಲಿದ್ದ ಎಲ್ಲರ ಸುರಕ್ಷತೆ ದೃಷ್ಟಿಯಿಂದ ಪೈಲಟ್ ತಕ್ಷಣ ಕ್ರಮ ಕೈಗೊಂಡು, ವಿಮಾನವನ್ನು ಮಗದನ್ ವಿಮಾನನಿಲ್ದಾಣಕ್ಕೆ ತಿರುಗಿಸಿ ಲ್ಯಾಂಡ್ ಮಾಡಲಾಗಿತ್ತು.
ಈ ವೇಳೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಮುಂಬೈನಿಂದ ಮತ್ತೊಂದು ವಿಮಾನವನ್ನು ರವಾನೆ ಮಾಡಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಸ್ಥಳಗಳಿಗೆ ರವಾನೆ ಮಾಡಲಾಗಿತ್ತು. ಈ ಬಗ್ಗೆ ಏರ್ ಇಂಡಿಯಾ ಪ್ರಯಾಣಿಕರಿಗೆ ಆದ ಅಡಚಣೆ ಬಗ್ಗೆ ವಿಷಾದ ವ್ಯಕ್ತಪಡಿಸಿತ್ತು.
ಇದಾದ ಕೆಲವೇ ತಿಂಗಳಲ್ಲಿ ಅದೇ ವಿಮಾನದಲ್ಲಿ ಮತ್ತೊಮ್ಮೆ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಆ ವಿಮಾನದ ಹಾರಾಟ ರದ್ದು ಮಾಡಲಾಗಿದ್ದು, ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ ಪ್ರಯಾಣಿಕರಿಗೆ ಆದ ಅಡಚಣೆಗೆ ವಿಷಾದ ವ್ಯಕ್ತಪಡಿಸಿದ್ದು, ಪರಿಹಾರದ ಪ್ಯಾಕೇಜ್ ಕೂಡಾ ನೀಡಲಾಗಿದೆ.
ಇದನ್ನೂ ಓದಿ : ನಾಗ್ಪುರ-ಬೆಂಗಳೂರು ಇಂಡಿಗೋ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನ; ಪ್ರಯಾಣಿಕನ ಬಂಧನ, ಬಿಡುಗಡೆ