ಮುಂಬೈ(ಮಹಾರಾಷ್ಟ್ರ): ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಹಣಕ್ಕೆ ಬೇಡಿಕೆ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋದ(ಎನ್‌ಸಿಬಿ) ಮುಂಬೈ ವಲಯದ ನಿರ್ದೆಶಕ ಸಮೀರ್ ವಾಂಖೆಡೆ ಅವರು ತನಿಖಾ ಸಮಿತಿಯ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದರು.
ಎನ್ಸಿಬಿಯ ಪಶ್ಚಿಮ ವಲಯದ ಡೆಪ್ಯುಟಿ ಡೈರೆಕ್ಟರ್ ಆಗಿರುವ ಹಾಗೂ ತನಿಖಾ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಜ್ಞಾನೇಶ್ವರ್ ಸಿಂಗ್ ಅವರು ಸುಮಾರು ನಾಲ್ಕು ಗಂಟೆಗಳ ಕಾಲ ಸಮೀರ್ ವಾಂಖೆಡೆಯವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರನನ್ನು ಬಿಡುಗಡೆ ಮಾಡುವ ಸಂಬಂಧ ಹಣಕ್ಕಾಗಿ ಬೇಡಿಕೆ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆ ನೀಡಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜ್ಞಾನೇಶ್ವರ್ ಸಿಂಗ್, ಎನ್‌ಸಿಬಿ ತಂಡವು ಪ್ರಕರಣದ ಕುರಿತಂತೆ ಕೆಲವು ನಿರ್ಣಾಯಕ ದಾಖಲೆಗಳನ್ನು ಸಂಗ್ರಹಿಸಿದೆ. ನಾವು ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಸಮೀರ್ ವಾಂಖೆಡೆ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಈ ಸಮಯದಲ್ಲಿ ಅವರು ತಂಡದ ಮುಂದೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತೇವೆ. ಅಗತ್ಯವಿದ್ದರೆ ಕೆಲವು ದಾಖಲೆಗಳನ್ನೂ ಕೂಡಾ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇನ್ನು, ಸಮೀರ್ ವಾಂಖೆಡೆ ಅವರ ಹೇಳಿಕೆಯನ್ನು ಎರಡೂ ಕಡೆ ಅಂದರೆ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಎನ್‌ಸಿಬಿ ಕಚೇರಿಯಲ್ಲಿ ಮತ್ತು ಬಾಂದ್ರಾದಲ್ಲಿನ ಸಿಆರ್‌ಪಿಎಫ್ ಮೆಸ್‌ನಲ್ಲಿ ದಾಖಲಿಸಿಕೊಳ್ಳಲಾಗಿದೆ.
ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖೆಗೆ ಅಡ್ಡಿಯಾಗುವುದೇ?
ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣವನ್ನು ಸಮೀರ್ ವಾಂಖೆಡೆ ನಡೆಸುತ್ತಿದ್ದರು. ಈಗ ಅವರ ಮೇಲೆಯೇ ಭ್ರಷ್ಟಾಚಾರದ ಗಂಭೀರ ಆರೋಪ ಕೇಳಿಬಂದಿರುವ ಕಾರಣದಿಂದ ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದ ತನಿಖೆಯನ್ನು ಸಮೀರ್ ವಾಂಖೆಡೆಯೇ ಮುಂದುವರೆಸುತ್ತಾರಾ ಎಂಬ ಪ್ರಶ್ನೆ ಕಾಡುತ್ತಿತ್ತು.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಜ್ಞಾನೇಶ್ವರ್ ಸಿಂಗ್, ಪ್ರಕರಣದ ತನಿಖೆ ಮುಂದುವರೆಯಲಿ. ನನ್ನ ಬಳಿ ಯಾವುದಾದರೂ ಸಂಕೀರ್ಣವಾದ ಮಾಹಿತಿಯಿದ್ದರೆ ಮಾತ್ರ ನಾನು ಅದರ ವರದಿಯನ್ನು ಡಿಜಿಗೆ ಸಲ್ಲಿಸುತ್ತೇನೆ ಎಂದಿದ್ದಾರೆ.
'ಸೆಲ್ಫಿ ಮ್ಯಾನ್' ಕೆ.ಪಿ.ಗೋಸಾವಿ ಮತ್ತು ಪ್ರಭಾಕರ್ ಸೈಲ್ ಬಗ್ಗೆ ಮಾತನಾಡುತ್ತಾ, ಇವರಿಬ್ಬರನ್ನೂ ಜಂಟಿ ತನಿಖೆಗೆ ಒಳಪಡಿಸಬೇಕಿದೆ. ಇವರಿಬ್ಬರಿಗೂ ಯಾವುದಾದರೂ ಆರೋಪ ಅಥವಾ ದೂರುಗಳಿದ್ದರೆ ನಮ್ಮನ್ನು ಸಂಪರ್ಕಿಸಿ, ತಮ್ಮ ಹೇಳಿಕೆಯನ್ನು ದಾಖಲಿಸಬಹುದು ಎಂದು ಜ್ಞಾನೇಶ್ವರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಶಿಲ್ಪಾ ಶೆಟ್ಟಿ ದಂಪತಿಯಿಂದ ಮಾನಸಿಕ ಕಿರುಕುಳ... 75 ಕೋಟಿ ರೂ. ಪರಿಹಾರ ಕೇಳಿದ ಶೆರ್ಲಿನ್